ಉಡುಪಿ, ಡಿ 26 (DaijiworldNews/DB): ಕೋವಿಡ್ ಭೀತಿ ಮತ್ತೆ ಎದುರಾಗಿದ್ದು, ಈ ಕುರಿತು ಸಾರ್ವಜನಿಕರು ಯಾವುದೇ ಭಯ ಪಡದೆ ಸ್ವಯಂ ಪ್ರೇರಿತರಾಗಿ ಆರೋಗ್ಯ ರಕ್ಷಣೆಗೆ ತಯಾರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ್ ಉಡುಪ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಮಾಡುವ ಹಿನ್ನಲೆಯಲ್ಲಿ ಬಹಳಷ್ಟು ಮಾರ್ಗಸೂಚಿಗಳನ್ನು ಈಗಾಗಲೇ ತಂದಿದ್ದು ಸಾರ್ವಜನಿಕರು ಇದನ್ನು ವೈಯಕ್ತಿಕ ಜವಬ್ಬಾರಿಯನ್ನಾಗಿ ಭಾವಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಕೋವಿಡ್ ಜಿಲ್ಲೆಯಲ್ಲಿ ಬಾರದಂತೆ ನೋಡಿಕೊಳ್ಳಬೇಕು. ಈಗಾಗಲೇ 2ನೇ ಡೋಸ್ ತೆಗೆದುಕೊಂಡ ನಾಗರಿಕರು 3ನೇ ಡೋಸ್ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು.
ಪ್ರಾಥಮಿಕ ಕೇಂದ್ರ, ಸಮುದಾಯ ಕೇಂದ್ರ ಹಾಗೂ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಕೊರೊನಾಗೆ ಸಂಬಂಧಿಸಿದ ವ್ಯಾಕ್ಸಿನೇಷನ್ ಅಥವಾ ಸ್ವ್ಯಾಬ್ ಟೆಸ್ಟ್ ಮಾಡಲು ಅವಕಾಶವಿದ್ದು ಸಾರ್ವಜನಿಕರು ಇದನ್ನು ಉಪಯೋಗಿಸಿಕೊಳ್ಳಬೇಕು. ಶೀತ, ಕಫ ಮತ್ತು ಜ್ವರದಂತಹ ಲಕ್ಷಣ ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ಪರಿಶೀಲಿಸಿಕೊಳ್ಳಬೇಕು ಎಂದರು.
ಕಳೆದ ಬಾರಿ ಕೋವಿಡ್ ಕಾಲಘಟ್ಟದಲ್ಲಿ ಜಿಲ್ಲೆಯು ಕಾಯಿಲೆ ಹರಡದಂತೆ ಹಾಗೂ ವ್ಯಾಕ್ಸಿನೇಷನ್ ವಿಷಯದಲ್ಲಿ ಶೇಕಡಾ 90ರಷ್ಟು ಸಾಧನೆ ಮಾಡಿದೆ. ಈ ಬಾರಿ ಕೂಡಾ ಜಿಲ್ಲೆಯ ಜನತೆ ಎಲ್ಲಾ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿ ಕಾಯಿಲೆ ಹರಡದಂತೆ ನೋಡಿಕೊಳ್ಳಬೇಕು ಎಂದವರು ತಿಳಿಸಿದರು.
ಕೋವಿಡ್ ಮಹಾಮಾರಿ ಹರಡದಂತೆ ಆರೋಗ್ಯ ಇಲಾಖೆ ಸನ್ನದ್ಧವಾಗಿದ್ದು ಆಕ್ಸಿಜನ್ ಹಾಗೂ ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯ ಜನತೆ ಜಾಗರೂಕರಾಗಬೇಕು ಎಂದರು.