ಮಂಗಳೂರು, ಡಿ 26 (DaijiworldNews/DB): ಸುರತ್ಕಲ್ನಲ್ಲಿ ಉದ್ಯಮಿ ಜಲೀಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಡಿಸೆಂಬರ್ 29ರವರೆಗೆ ವಿಸ್ತರಿಸಿ ಮಂಗಳೂರು ನಗರ ಪೊಲೀಸರು ಆದೇಶಿಸಿದ್ದಾರೆ.
ಸುರತ್ಕಲ್, ಕಾವೂರು, ಬಜಪೆ ಮತ್ತು ಪಣಂಬೂರು ಪ್ರದೇಶಗಳಲ್ಲಿ ಡಿಸೆಂಬರ್ 27ರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 29ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ.
ಡಿಸೆಂಬರ್ 24ರಂದು ಜಲೀಲ್ ಅವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆಗೈದಿದ್ದರು. ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯ ನಿಷೇಧ ವಿಸ್ತರಣೆ
ಇನ್ನು ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ, ದಾಸ್ತಾನು, ಸಾಗಾಣಿಕೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಡಿಸೆಂಬರ್ 29ರ ಬೆಳಗ್ಗೆ 10 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಡಿಸೆಂಬರ್ 27ರಂದು ಬೆಳಗ್ಗೆ 10 ಗಂಟೆಯಿಂದ ಡಿಸೆಂಬರ್ 29ರ ಬೆಳಗ್ಗೆ 10 ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಕೂಡಾ ಮುಚ್ಚಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರದೇಶಗಳಲ್ಲಿ ಪ್ರಕ್ಷುಬ್ದ ವಾತಾವರಣವಿರುವ ಹಿನ್ನೆಲೆಯಲ್ಲಿ ಮದ್ಯಪಾನಿಗಳು ಸಾರ್ವಜನಿಕ ಸೊತ್ತು ನಾಶ, ಹಲ್ಲೆ, ದೊಂಬಿ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಮತ್ತು ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡುವ ಸಾಧತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಈ ಅವಧಿಯಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಡಿಪೋವನ್ನು ತೆರೆದಿಡಲು ಹಾಗೂ ಈ ಡಿಪೋದಿಂದ ಮೂಲ್ಕಿ, ಮೂಡಬಿದಿರೆ ತಾಲೂಕುಗಳಲ್ಲಿನ ಸನ್ನದುಗಳಿಗೆ ಮದ್ಯ ಸಾಗಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.