ಕುಂದಾಪುರ, ಡಿ 26 (DaijiworldNews/DB): ಹಲವು ಸಂಸಾರಗಳು ಜಗಳದಲ್ಲೇ ಮುರಿದು ಬೀಳುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ವೃದ್ದ ಜೋಡಿ ಅನ್ಯೋನ್ಯವಾಗಿ ಸಂಸಾರ ಮಾಡಿ ಸಾವಿನಲ್ಲೂ ಒಂದಾಗಿದ್ದಾರೆ. ಒಂದೇ ಚಿತೆಯೇರಿದ್ದಾರೆ.
ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ ಮುಡೂರ ದೇವಾಡಿಗರಿಗೆ 85 ವರ್ಷ ಪ್ರಾಯ. 1937ರಲ್ಲಿ ಜನಿಸಿದ್ದ ಅವರು, ವಯೋಸಹಜ ಅನಾರೋಗ್ಯದಿಂದಾಗಿ ಭಾನುವಾರ ರಾತ್ರಿ ಅವರ ಪತ್ನಿ ಮನೆಯಾದ ಬಿಜೂರಿನಲ್ಲಿ ಸಾವನ್ನಪ್ಪಿದ್ದರು. ಸಾವಿನ ಸುದ್ಧಿ ಕುಟುಂಬಿಕರಿಗೆ, ಊರವರಿಗೆ ಮುಟ್ಟಿ ಜನ ಸೇರಿದರು. ಮನೆಯೊಳಗೆ ಮುಡೂರ ದೇವಾಡಿಗರ ಮೃತದೇಹವನ್ನಿಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಲಾಗುತ್ತಿತ್ತು. ಇದ್ದಕ್ಕಿದ್ದಂತೆ ಅವರ ಪತ್ನಿ 77 ವರ್ಷ ಪ್ರಾಯದ ಕೃಷ್ಣಿ ದೇವಾಡಿಗ ಪತಿಯ ಪಾರ್ಥಿವ ಶರೀರದ ಎದುರೇ ಕುಳಿತಿದ್ದಲ್ಲಿಯೇ ಕುಸಿದು ಬಿದ್ದರು. ನೆರೆದವರು ಏನಾಯ್ತು ಎಂಬದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಕೃಷ್ಣಿ ದೇವಾಡಿಗ ಪತಿ ಮಡೂರ ದೇವಾಡಿಗರ ಹಾದಿ ತುಳಿದಾಗಿತ್ತು!
ಸಂಸಾರದ ನೊಗವನ್ನು ಜೊತೆಯಾಗಿಯೇ ಹೊತ್ತವರು ಸಾವಿನಲ್ಲಿಯೂ ಜೊತೆಯಾಗಿ ಪ್ರಯಾಣಿಸಿದ್ದರು. 5 ಜನ ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಇವರ ಸಾವು ಅಮರ ಪ್ರೇಮದ ಕಥೆ ಸಾರುವಂತಿತ್ತು.