ಮಂಗಳೂರು/ಉಡುಪಿ, ಡಿ 26 (DaijiwordNews/HR): ಕ್ರಿಸ್ಮಸ್ ರಜೆ, ವಿಕೇಂಡ್, ಹೊಸ ವರ್ಷಾಚರಣೆ ಎಲ್ಲವನ್ನು ಸೇರಿದಂತೆ ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಿದೆ.
ಮಂಗಳೂರು, ಉಡುಪಿಯ ಪ್ರಮುಖ ಹೊಟೇಲ್ಗಳ ಕೊಠಡಿಗಳು ಜನವರಿ ಮೊದಲ ವಾರದವರೆಗೂ ಬುಕ್ ಆಗಿದ್ದು, ಹೋಂ ಸ್ಟೇಗಳು, ರೆಸಾರ್ಟ್ಗಳು, ಸರ್ವಿಸ್ ಅಪಾರ್ಟ್ಮೆಂಟ್ಗಳೂ ಭರ್ತಿಯಾಗಿವೆ.
ಇನ್ನು ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ, ಕ್ರಿಸ್ಮಸ್ ಆಚರಣೆ ಮೇಲೆ ಒಂದಿಲ್ಲೊಂದು ರೀತಿಯ ನಿಯಂತ್ರಣ ಕ್ರಮಗಳಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮಯಾಗಿತ್ತು. ಆದರೆ ಈ ಬಾರಿ ಮುಖ್ಯವಾಗಿ ವರ್ಷಾಂತ್ಯಕ್ಕೆ ಊರಿಗೆ ಮರಳಿರುವ ಅನಿವಾಸಿ ಭಾರತೀಯರು, ಕ್ರಿಸ್ಮಸ್ ರಜೆಗೆ ಸುತ್ತಾಟಕ್ಕೆ ಆಗಮಿಸಿರುವಂತಹ ಕುಟುಂಬಗಳಿಂದಾಗಿ ಜನಸಂದಣಿ ಹೆಚ್ಚಿದೆ.
ಮಂಗಳೂರು ನಗರದಲ್ಲಿರುವ ವಿವಿಧ ಶಾಪಿಂಗ್ ಮಾಲ್ಗಳು, ನಗರದ ಪ್ರಮುಖ ರೆಸ್ಟೋರೆಂಟ್, ಐಸ್ಕ್ರೀಂ ಪಾರ್ಲರುಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ಮೂಡು ಬಿದಿರೆಯ ಸಾಂಸ್ಕೃತಿಕ ಜಾಂಬೂರಿ ನೋಡಲು ಬರುವವರ ಸಂಖ್ಯೆಯೂ ಅಧಿಕವಾಗಿದೆ.