ಮಂಗಳೂರು, ಡಿ 25 (DaijiworldNews/HR): ಸುರತ್ಕಲ್ನಲ್ಲಿ ನಿನ್ನೆ ಕೊಲೆ ನಡೆದಿದ್ದು, ಪೊಲೀಸರು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳುತ್ತಾರೆ. ಈ ಹತ್ಯೆ ಆಗಬಾರದಿತ್ತು, ಇದು ಬಹಳ ದುರದೃಷ್ಟಕರ. ಪೋಸ್ಟ್ ಮಾರ್ಟಮ್ ಆಗಿ ಅವರ ಅಂತ್ಯಕ್ರಿಯೆ ಕೂಡ ಶಾಂತಿಯುತವಾಗಿ ಆಗಿದ್ದು, ತನಿಖೆ ಬಹಳ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಏರ್ಪೋರ್ಟ್ನಲ್ಲಿ ಮಾತನಾಡಿದ ಸಿಎಂ, ಐವಿಟ್ನೆಸ್ ಹೇಳಿರೋ ಪ್ರಕಾರ ಇಬ್ಬರು ಕೊಲೆ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಅವರನ್ನು ಬೇಗ ಹಿಡಿಯುತ್ತೇವೆ ಎಂಬ ವಿಶ್ವಾಸ ಇದೆ. ಹಿಡಿದು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸುತ್ತೇವೆ. ವಿಚಾರಣೆ ವೇಳೆ ಕಾರಣ ಏನು, ಹಿನ್ನೆಲೆ ಏನು, ಸತ್ಯಾಸತ್ಯತೆ ಹೊರಬರುತ್ತೆ ಎಂದರು.
ಇನ್ನು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಜನತೆಗೆ ಮನವಿ ಮಾಡುತ್ತೇನೆ. ಊಹಾಪೋಹಗಳಿಗೆ ಅವಕಾಶ ಕೊಡದೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗುವಂತೆ ಯಾರು ಕೂಡ ನಡೆದುಕೊಳ್ಳಬಾರದು. ಶಾಂತಿಯನ್ನು ಕಾಪಾಡಿಕೊಳ್ಳಬೇಕು, ಪರಸ್ಪರ ವಿಶ್ವಾಸದಿಂದ ಹೋಗುವ ಅವಶ್ಯಕತೆ ಇದೆ. ಪೊಲೀಸರಿಗೆ ಅದನ್ನು ಬಿಟ್ಟುಬಿಡಿ, ಸ್ವಾತಂತ್ರ್ಯವಾಗಿ ಅವರು ತನಿಖೆ ಮಾಡುತ್ತಾರೆ. ತಪ್ಪಿತಸ್ಥರು ಯಾರೇ ಇದ್ರು ನೂರಕ್ಕೆ ನೂರು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸಿಎಂ ಹೇಳಿದ್ದ 'ಆಕ್ಷನ್ ರಿಯಾಕ್ಷನ್' ನಿಂದ ಕರಾವಳಿಯಲ್ಲಿ ಅಹಿತಕರ ಘಟನೆ ಎಂಬ ವಿಪಕ್ಷ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಯಾರು ವೈಲೆನ್ಸ್ ಪ್ರಾರಂಭ ಮಾಡುತ್ತಾರೆ. ವೈಲೆನ್ಸ್ ಗೆ ದಾರಿ ಮಾಡಿಕೊಡೊ ಯಾವುದೇ ಪ್ರಕ್ರಿಯೆ ಇದ್ಯಲ್ಲಾ ಅದನ್ನ ಹತ್ತಿಕ್ಕೊದು ನಮ್ಮ ಕರ್ತವ್ಯ ಅಲ್ವಾ? ಅದು ಸಾಮಾಜದ ಕರ್ತವ್ಯನೂ ಹೌದು, ಸರ್ಕಾರದ ಕರ್ತವ್ಯ ಕೂಡ ಹೌದು ಅದನ್ನು ನಿರಾಕರಣೆ ಮಾಡುವಂತದ್ದಲ್ಲ, ಯಾರೇ ತಪ್ಪು ಮಾಡಲಿ, ಅಕ್ಷನ್ ರಿಯಾಕ್ಷನ್ ಪ್ರಶ್ನೆಯೆ ಇಲ್ಲ ಎಂದಿದ್ದಾರೆ.
ಒಂದು ಇನ್ಸಿಡೆಂಟ್ ನ ನಿಜವಾದ ಕಾರಣ ಬಿಟ್ಟು ಬೇರೆ ಏನನ್ನೊ ಮಾಡೊಕೆ ಹೋದ್ರೆ ಈ ಇನ್ಸಿಡೆಂಟ್ ನ ನಿಜವಾದ ಕಾರಣ ಏನು ಅನ್ನೊದು ತಪ್ಪಿ ಹೋಗುತ್ತೆ. ಆದ್ರಿಂದ ಈ ತನಿಖೆನ ಪೊಲೀಸರಿಗೆ ಬಿಡಿ. ಅವರು ನಿಷ್ಪಕ್ಷಪಾತವಾಗಿ ನಿಷ್ಟೂರವಾಗಿ ತನಿಖೆ ಮಾಡ್ತಾರೆ. ಸತ್ಯಾಸತ್ಯತೆ ಹೊರಬರುತ್ತೆ ಎಂದು ಹೇಳಿದ್ದಾರೆ.