ಮಂಗಳೂರು, ಡಿ 25 (DaijiworldNews/HR): ಸುರತ್ಕಲ್ ನ ಕೃಷ್ಣಾಪುರ ಐದನೇ ಬ್ಲಾಕ್ ನಲ್ಲಿ ಶನಿವಾರ ರಾತ್ರಿ ಫ್ಯಾನ್ಸಿ ಸ್ಟೋರ್ ಮಾಲಕ ಜಲೀಲ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 4-5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಮಾಡುವ ವೇಳೆ ಮುಸ್ಲಿಂ ಮುಖಂಡರು ಪೊಲೀಸ್ ಆಯುಕ್ತರ ಬಳಿ ಈ ಪ್ರಕರಣ ತನಿಖೆಯನ್ನು ಎನ್ ಐಎಗೆ ವಹಿಸಬೇಕೆಂದು ಮೃತದೇಹ ಇಟ್ಟು ಪ್ರತಿಭಟಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಂಬಂಧ 4-5 ಮಂದಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು,ಇದರಲ್ಲಿ ಇಬ್ಬರು ಮಹಿಳೆಯರನ್ನು ಕೂಡ ವಿಚಾರಣೆಗೊಳಪಡಿಸಿ ಅವರಿಂದ ಕೆಲ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಶನಿವಾರ ರಾತ್ರಿ ದುಷ್ಕರ್ಮಿಗಳಿಬ್ಬರು ಜಲೀಲ್ ಅವರನ್ನು ಚಾಕುವಿನಿಂದ ಇರಿದಿದ್ದು, ಆಸ್ಪತ್ರೆಯಲ್ಲಿ ಜಲೀಲ್ ಮೃತಪಟ್ಟಿದ್ದರು.
ಗ್ರಾಹಕರ ಸೋಗಿನಲ್ಲಿ ರಾತ್ರಿ 8.30ರ ಸುಮಾರಿಗೆ ಇಬ್ಬರು ಯುವಕರು ಅಂಗಡಿಗೆ ಬಂದಿದ್ದು, ಓರ್ವ ಮಾಸ್ಕ್ ಧರಿಸಿದ್ದು, ಇನ್ನೋರ್ವ ಟವೆಲನ್ನು ಮುಖಕ್ಕೆ ಕಟ್ಟಿಕೊಂಡಿದ್ದ ಎನ್ನಲಾಗಿದೆ.