ಕುಂದಾಪುರ, ಡಿ 25 ( DaijiworldNews/MS): ನೈತಿಕತೆಯ ಬದುಕನ್ನು ರೂಪಿಸಿಕೊಂಡು, ಅದರಂತೆ ಬದುಕು ಸಾಗಿಸುತ್ತಿರುವವರು, ನಮ್ಮ ಸಮಾಜದಲ್ಲಿ ವಿರಳರಾಗುತ್ತಿರುವ ಈ ಕಾಲಘಟ್ಟದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರಂತಹ ಅಜಾತಶತ್ರುಗಳ ನಡುವೆ ನಾವಿದ್ದೇವೆ ಎನ್ನುವ ಹೆಮ್ಮೆ ನಮಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಹೇಳಿದರು.
ಸಮೀಪದ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಶನಿವಾರ ಸಂಜೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ (ರಿ) ದ ವತಿಯಿಂದ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ 88 ನೇ ಹುಟ್ಟುಹಬ್ಬ ಆಚರಣೆ, ದತ್ತಿನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ಹೊತ್ತಿನ ಅನ್ನದಾನದಿಂದ ಹಸಿದವರ ಹೊಟ್ಟೆ ತುಂಬುವುದಿಲ್ಲ. ಒಂದು ದಿನದ ಸಂಭ್ರಮದ ಸಂತೋಷಕ್ಕಿಂತ ನೆಲದ ಸಂಪತ್ತನ್ನು ಪಡೆದುಕೊಳ್ಳುವ ದೀಶಕ್ತಿಗಳಿರಬೇಕು. ಆರೋಗ್ಯ ಹಾಗೂ ಶಿಕ್ಷಣದ ಪ್ರಾಥಮಿಕ ಅವಶ್ಯಕತೆಗಳಿಗೆ ಮೊದಲ ಆಯ್ಕೆ ನೀಡಬೇಕು. ಕೌಟುಂಬಿಕ ಸಮಸ್ಯೆಗಳನ್ನೆ ಪರಿಹರಿಸುವುದೆ ಹೆಚ್ಚಾಗಿರುವ ಪೊಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಹೊಣೆ ನಿರ್ವಹಿಸಲು ಸಮಯ ದೊರಕದೆ ಇರುವ ಸ್ಥಿತಿ ಇದೆ ಎಂದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಅವರು, ಪ್ರಕೃತಿ ಹಾಗೂ ನೆಲದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಸಂಸ್ಕೃತಿಯೊಂದಿಗೆ ಭಾಷೆಯೂ ಬದಲಾವಣೆಯಾಗುತ್ತಿದೆ. ಶಿಕ್ಷಣದಲ್ಲಿ ನೆಲದ ಚರಿತ್ರೆಗಳೇ ಕಾಣದಂತಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವುದಷ್ಟೇ ಕಾಯಕವಾದರೆ ಜ್ಞಾನ ಸಂಪತ್ತುಗಳನ್ನು ಪಡೆದುಕೊಳ್ಳುವ ಬಗೆ ಹೇಗೆ ಎನ್ನುವ ಚಿಂತನೆ ನಡೆಯಬೇಕು. ಶಿಕ್ಷಣ ಸಂಸ್ಥೆಗಳ ಅಧ್ಯಯನಶೀಲತೆ, ಸಂಶೋಧನೆ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಬೇಕು ಎಂದರು.
ಕೇಮಾರು ಸಾಂದೀಪನಿ ಮಠದ ಈಶವಿಠ್ಠಲದಾಸ ಸ್ವಾಮೀಜಿ ಅವರು, ಬ್ರಿಟೀಷರು ೨೦೦ ವರ್ಷ ಆಳಿದರೂ ನಾಶ ಮಾಡಲಾಗದ ನಮ್ಮ ಭವ್ಯ ಸಂಸ್ಕೃತಿಗಳನ್ನು ಸಾಮಾಜಿಕ ಜಾಲಾತಾಣಗಳು ನಾಶ ಮಾಡುತ್ತಿದೆ. ಮೊಬೈಲ್ ಹಾಗೂ ಇಂಟರ್ನೆಟ್ಗಳು ನಮ್ಮತನವನ್ನು ಕಸಿಯುತ್ತಿದೆ. ಸೆಲ್ (ಜೈಲ್) ನೊಳಗಿಂದ ನಿಂದ ಹೊರ ಬರಲು ವ್ಯವಸ್ಥೆ ಇದೆ. ಆದರೆ ಮೊಬೈಲ್ ಸೆಲ್ನಿಂದ ಬಿಡುಗಡೆಯೇ ಇಲ್ಲದಂತಹ ಸ್ಥಿತಿ ಇದೆ. ಜನ ಎಷ್ಟು ಎನ್ನುವುದು ಮುಖ್ಯವಲ್ಲ, ಅದರಲ್ಲಿ ಯೋಗ್ಯರು ಹಾಗೂ ಒಳ್ಳೆಯವರು ಎಷ್ಟು ಎನ್ನುವುದೇ ಮುಖ್ಯವಾಗುತ್ತದೆ. ಮಕ್ಕಳಿಗೆ ಬಾಲ್ಯದಿಂದಲೆ ಪ್ರಶಿಕ್ಷಣ ಕೊಡುವ ಕ್ರಮಗಳಾಗಬೇಕು. ಜಾಹಿರಾತು ಯುಗದಲ್ಲಿ ಇರುವ ನಾವು, ಸ್ವದೇಶ ಹಾಗೂ ಸ್ವಧರ್ಮದ ಕಲ್ಪನೆಯನ್ನು ರೂಢಿಸಿಕೊಳ್ಳಬೇಕು ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ರಾಜ್ಯ ಆಹಾರ ಹಾಗೂ ನಾಗರೀಕ ಸೌಲಭ್ಯ ನಿಗಮದ ಉಪಾಧ್ಯಕ್ಷ ಕಿರಣ್ಕುಮಾರ ಕೊಡ್ಗಿ ಅವರು ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ಅಭಿನಂದಿಸಿದರು. ಶ್ರೀ ಶಾರದಾ ಪದವಿ ಕಾಲೇಜು ಬಸ್ರೂರು, ಶಾರದಾ ಪದವಿ ಪೂರ್ವ ಕಾಲೇಜು, ಗುರುಕುಲ ಪಬ್ಲಿಕ್ ಸ್ಕೂಲ್, ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು, ನಿವೇದಿತಾ ಪ್ರೌಢಶಾಲೆಯ ವತಿಯಿಂದ ಗೌರವಾರ್ಪಣೆ ನಡೆಯಿತು. ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ, ಅಶಕ್ತರಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು.
ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ, ಸುಶಾಂತ್ ರೈ, ನಿರುಪಮಾ ಹೆಗ್ಡೆ, ಪ್ರೀತಮ್ ಎಸ್ ರೈ ಇದ್ದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ (ರಿ) ದ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಸ್ವಾಗತಿಸಿದರು, ಆಡಳಿತ ಟ್ರಸ್ಟಿ ರಾಮ್ಕಿಶನ್ ಹೆಗ್ಡೆ ವರದಿ ಮಂಡಿಸಿದರು, ಸುನೀಲ್ ಪಾಂಡೇಶ್ವರ ಅಭಿನಂದನಾ ಪತ್ರ ವಾಚಿಸಿದರು, ರಾಜೇಶ್ ಕೆ.ಸಿ, ನಿರೂಪಿಸಿದರು, ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ವಂದಿಸಿದರು.