ಸುರತ್ಕಲ್, ಡಿ 25 ( DaijiworldNews/MS): ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯವೇ ಮತ್ತೊಂದು ಅಮಾಯಕ ಜೀವದ ಕೊಲೆಗೆ ಕಾರಣ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣಾಪುರ, ನಾಲ್ಕನೇ ಬ್ಲಾಕ್ ನಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ಅಂಗಡಿ ಮಾಲೀಕ ಜಲೀಲ್ ಎಂಬವರು ನಿಧನರಾದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದ ಮಾಜಿ ಶಾಸಕ ಮೊಯಿದ್ದೀನ್ ಬಾವ "ದಯವಿಟ್ಟು ನಾಗರೀಕರು ಸೋಷಿಯಲ್ ಮೀಡಿಯಾದಲ್ಲಿ ಬರುವ ಯಾವುದೇ ರೀತಿಯ ಸಮಾಜದಲ್ಲಿ ಅಶಾಂತಿ ಮೂಡಿಸುವ ಸುಳ್ಳು ವದಂತಿಗಳಿಗೆ ಕಿವಿಕೊಡದೆ ಶಾಂತಿಯಿಂದ ವರ್ತಿಸಿ ಸಾರ್ವಜ ನಿಕರಿಗೆ ತೊಂದರೆ ಆಗದಂತೆ ಜಾಗೃತಿ ವಹಿಸಿ ಪೋಲಿಸ್ ಅಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ಸಹಕರಿಬೇಕು" ಎಂದು ಜನತೆಯಲ್ಲಿ ವಿನಂತಿಸಿದರು.
ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಾನೂನು ರೀತಿಯಲ್ಲಿ ಕಠಿಣ ರೀತಿಯ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕರಾವಳಿ ಪ್ರದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಕೊಲೆ ಪ್ರಕರಣಗಳನ್ನು ಹಾಗೂ ಇತ್ತೀಚಿಗೆ ಸುರತ್ಕಲ್ ಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಇತರೆಡೆ ನಡೆದ ಕೊಲೆ ಪ್ರಕರಣ ಮಾಸಿ ಹೋಗುವ ಮುನ್ನವೇ ಮತ್ತೊಂದು ಕೊಲೆ ನಡೆದಿರುವುದು ಖೇದಕರದ ಸಂಗತಿ. ಈ ಹಿಂದೆ ನಡೆದ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ ಅರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕಠಿಣ ಕ್ರಮಕೈಗೋಳ್ಳುವಲ್ಲಿ ನಿರುತ್ಸಾಹ ತೋರಿಸಿದ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಕೊಲೆ ನಡೆದಿದೆ ಎಂದು ಆರೋಪಿಸಿದರು