ಚಿತ್ರ: ಪ್ರಸನ್ನ ರೈ.ಎಸ್ , ರಿಫ್ಲೆಕ್ಷನ್ - ಪುತ್ತೂರು
ಬಂಟ್ವಾಳ,ಮಾ 07 (MSP): ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ 16 ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಾವಿರ ಸೀಮೆಯ ವ್ಯಾಪ್ತಿಯ ಐತಿಹಾಸಿಕ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಮಾ.4ರಿಂದ ಪ್ರಾರಂಭವಾಗಿದ್ದು ಮಾ.13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸುಮಾರು 1700 ವರ್ಷಗಳ ಹಿನ್ನೆಲೆ ಹೊಂದಿರುವ ದೇವಾಲಯದಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯನ್ನು ಪೂಜಿಸಲಾಗುತ್ತಿದ್ದು, ಸುಮಾರು ಒಂಬತ್ತು ಅಡಿಗಳಿಗೂ ಮೀರಿದ ಬೃಹತ್ ಮೂರ್ತಿ ಶ್ರೀ ರಾಜರಾಜೇಶ್ವರಿ ಮೂರ್ತಿಯನ್ನು ವಿಶಿಷ್ಟವಾಗಿ ಪರಿಪಾಕಗೊಂಡ ಮಣ್ಣಿನಿಂದ ನಿರ್ಮಿಸಲಾಗಿದೆ. ಇದರೊಂದಿಗೆ ಶ್ರೀ ರಾಜರಾಜೇಶ್ವರಿ ಎಡಬಲದಲ್ಲಿ ಹೆಚ್ಚು ಎತ್ತರವಲ್ಲದಿದ್ದರೂ ಕಿರಿದಲ್ಲದ ಸರಸ್ವತಿ, ಭದ್ರಕಾಳಿ,ಸುಬ್ರಹ್ಮಣ್ಯ, ಮಹಾಗಣಪತಿ ವಿಗ್ರಹಗಳು ಮಣ್ಣಿನಿಂದಲೇ ರೂಪಿಸಲ್ಪಟ್ಟಿವೆ.
ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ದೇವಳ ನವೀಕರಣಗೊಂಡಿದ್ದು, ಶ್ರೀ ದುರ್ಗಾಪರಮೇಶ್ವರಿ, ರಾಜರಾಜೇಶ್ವರಿ, ಮಹಾಗಣಪತಿ, ಭದ್ರಕಾಳಿ ಹಾಗೂ ಪರಿವಾರ ಸಾನ್ನಿಧ್ಯಗಳ ಗರ್ಭಗೃಹಗಳನ್ನು ಪುನಃ ನಿರ್ಮಿಸಲಾಗಿದೆ. ಪೊಳಲಿ ಕ್ಷೇತ್ರದಲ್ಲಿ ವಿಶೇಷವಾಗಿ ಮೂಲದೇವರಾದ ಶ್ರೀ ರಾಜರಾಜೇಶ್ವರಿ ಮಣ್ಣಿನ ರೂಪದಲ್ಲಿರುವುದರಿಂದ ಅದರ ಶಕ್ತಿಯನ್ನು ಕಂಚಿನ ಮೂರ್ತಿಗೆ ಆವಾಹನೆಗೊಳಿಸಿ ಅಭಿಷೇಕ ನಡೆಸಲಾಗುವುದು. ಮಣ್ಣಿನ ಮೂರ್ತಿಗೆ ಲೇಪಾಷ್ಟಬಂಧ ನಡೆಸಲಾಗುತ್ತದೆ.
ಕೊನೆಯ ದಿನವಾದ ಮಾರ್ಚ್ 13ರಂದು ಬ್ರಹ್ಮಕಲಶ ನಡೆಯಲಿದ್ದು, ದಿನಗಳ ಕಾಲ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕಾಗಿ ಗುರುಪುರ ಕೈಕಂಬದಿಂದ ಪೊಳಲಿಯವರೆಗೆ ರಸ್ತೆ ಇಕ್ಕೆಲ ಕೇಸರಿಮಯವಾಗಿದ್ದು ಭಗವಾಧ್ವಜ, ಫ್ಲೆಕ್ಸಗಳು ರಾರಾಜಿಸುತ್ತಿದೆ.