ಮಂಗಳೂರು, ಡಿ 24 (DaijiworldNews/HR): 2021ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಸರಕಾರ ವಶಪಡಿಸಿಕೊಂಡಾಗಿನಿಂದ ಅಫ್ಘಾನಿಸ್ತಾನದ ಜನತೆಯು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ತಾಲಿಬಾನ್ ಮಹಿಳೆಯರಿಗೆ ವಿರುದ್ಧವಾದ ಹೊಸ ನಿಯಮಗಳನ್ನು ಹೇರುತ್ತಲೇ ಇದ್ದು, ಅಫ್ಘಾನ್ ಹೆಣ್ಣುಮಕ್ಕಳು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಮಾಡದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು ಮಂಗಳೂರಿನಲ್ಲಿ ಓದುತ್ತಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಇದೀಗ ತಾಲಿಬಾನ್ ಸರ್ಕಾರದ ವಿರುದ್ಧ 'ಅಫ್ಘಾನ್ ಹುಡುಗಿಯರು ಕಲಿಯಲಿ' ಎಂದು ಧ್ವನಿ ಎತ್ತಿದ್ದಾರೆ.
ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹೊರಗಡೆ ಹೋಗಿ ಯಾವುದೇ ಕೆಲಸ ಮಾಡದಂತೆ ಹುಡುಗಿಯರು ವಿದ್ಯಾಭ್ಯಾಸ ಮಾಡದಂತೆ ಶಿಕ್ಷಣ ಸಂಸ್ಥೆಗಳನ್ನು ನಿಷೇಧಿಸುತ್ತಿದ್ದು, ಅನೇಕ ಯುವ ವಿದ್ಯಾರ್ಥಿಗಳು, ಹುಡುಗಿಯರು ಮತ್ತು ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಲು ಪ್ರಪಂಚದ ವಿವಿಧ ಭಾಗಗಳಿಗೆ ವಲಸೆ ಹೋಗಿದ್ದಾರೆ.
ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಬಾರದೆಂದು ವಿಶ್ವವಿದ್ಯಾಲಯಗಳನ್ನು ನಿಷೇಧಿಸಿದಕ್ಕೆ ಡಿಸೆಂಬರ್ 23 ರಂದು ತಾಲಿಬಾನ್ ಸರ್ಕಾರದ ವಿರುದ್ಧ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದು, ಆ ಐವರು ವಿದ್ಯಾರ್ಥಿನಿಯರನ್ನು ತಾಲಿಬಾನಿಗಳು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ 65 ಮಂದಿ ಅಫ್ಘಾನಿಸ್ತಾನದವರು ವಿವಿಧ ಸಂಸ್ಥೆಗಳಲ್ಲಿ ಓದುತ್ತಿದ್ದು, ಸಯ್ಯದ್ ಅನ್ವರ್ ಹುಸೇನಿ ಅವರ ನೇತೃತ್ವದಲ್ಲಿ ಆಫ್ಘನ್ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದ್ದು, ಸಯ್ಯದ್ ಮತ್ತು ಮಂಗಳೂರಿನಲ್ಲಿ ನೆಲೆಸಿರುವ ಕೆಲವು ಅಫ್ಘಾನಿ ವಿದ್ಯಾರ್ಥಿಗಳು ತಾಲಿಬಾನ್ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿ ಹುಡುಗಿಯರನ್ನು ಬಂಧಿಸಿರುವುದಕ್ಕೆ ಮತ್ತು ವಿಶ್ವವಿದ್ಯಾಲಯಗಳನ್ನು ನಿಷೇಧಿಸಿರುವುದಕ್ಕೆ 'ಅಫ್ಘಾನ್ ಹುಡುಗಿಯರು ಕಲಿಯಲಿ' ಎಂಬ ಫಲಕವನ್ನು ಹಿಡಿಯುವ ಮೂಲಕ ತಾಲಿಬಾನ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.
ದೈಜಿವರ್ಲ್ಡ್ನೊಂದಿಗೆ ಮಾತನಾಡಿದ ಸಯ್ಯದ್, 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದು, ಅವರು ರಾಷ್ಟ್ರವನ್ನು ಆಕ್ರಮಿಸಿಕೊಂಡ ನಂತರ ಮಾಜಿ ಅಧ್ಯಕ್ಷರು ದೇಶದಿಂದ ಪಲಾಯನ ಮಾಡಿದ್ದು, ಅಫ್ಘಾನಿಸ್ತಾನದ ಜನರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ ಎಂದರು.
ಇನ್ನು ಇತ್ತೀಚೆಗೆ ತಾಲಿಬಾನ್ ಸರ್ಕಾರವು ವಿಶ್ವವಿದ್ಯಾಲಯಗಳಿಂದ ಹುಡುಗಿಯರನ್ನು ನಿಷೇಧಿಸುವ ಹೊಸ ಆದೇಶವನ್ನು ಹೊರಡಿಸಿದ್ದು, ಈ ಹಿಂದೆ ಅವರು ಇಸ್ಲಾಂಗೆ ಸಂಬಂಧಿಸಿದ ಮಾಧ್ಯಮಿಕ ಶಿಕ್ಷಣದಿಂದ ಹುಡುಗಿಯರನ್ನು ನಿಷೇಧಿಸಿದ್ದರು. ಜೊತೆಗೆ ಹಿಜಾಬ್ ಕಡ್ದಾಯ ಧರಿಸಬೇಕು ಎಂದು ಕೂಡ ಆದೇಶಿದ್ದಾರೆ.
ತಾಲಿಬಾನ್ಗಳಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಲು ಭಯ!
ಅಫ್ಘಾನಿಸ್ತಾನದ ಅರ್ಧದಷ್ಟು ಜನಸಂಖ್ಯೆಯು ಮಹಿಳೆಯರನ್ನು ಒಳಗೊಂಡಿದ್ದು, ತಾಲಿಬಾನ್ಗಳು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಲು ಹೆದರುತ್ತಾರೆ. ತಾಲಿಬಾನ್ ಆಡಳಿತದ ಕಳೆದ 17 ತಿಂಗಳುಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಧ್ವನಿಯನ್ನು ಎತ್ತುತ್ತಿದ್ದಾರೆ ಮತ್ತು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿದ್ದಾರೆ. ತಾಲಿಬಾನ್ ವಿರುದ್ಧ ನಿಲ್ಲುವ ಧೈರ್ಯ ಪುರುಷರಿಗೆ ಇಲ್ಲ. ಹೆಣ್ಣುಮಕ್ಕಳು ವಿದ್ಯಾವಂತರಾದರೆ ತಾಲಿಬಾನ್ ವಿರುದ್ಧ ನಿಲ್ಲುತ್ತಾರೆ. ಅಶಿಕ್ಷಿತರಿಗೆ ಮಾತನಾಡಲು ಧೈರ್ಯವಿರುವುದಿಲ್ಲ ಮತ್ತು ತಾಲಿಬಾನ್ಗಳು ತಮ್ಮ ಸಿದ್ಧಾಂತವನ್ನು ಸುಲಭವಾಗಿ ಹೇರಬಹುದು ಎಂಬುದು ಅವರ ಉದ್ದೇಶವಾಗಿದೆ ಎಂದರು.
ವಿಶ್ವ ಸಂಸ್ಥೆಗಳು ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಂಡಿಲ್ಲ. ವಿಶ್ವಸಂಸ್ಥೆಯು ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಅವರ ಹಕ್ಕುಗಳೊಂದಿಗೆ ನಿಲ್ಲುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಇನ್ನು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮಹಿಳೆಯರಿಗೆ ಕ್ರೀಡಾ ಚಟುವಟಿಕೆಗಳನ್ನು ಸಹ ನಿಷ್ಕ್ರಿಯಗೊಳಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ನಾವು ಅಫ್ಘಾನಿಸ್ತಾನದ ಧ್ವಜವನ್ನು ಬೀಸುವಂತಿಲ್ಲ. ಅನೇಕ ಉತ್ಸಾಹಿಗಳು ತಮ್ಮ ಕನಸುಗಳನ್ನು ಬದುಕಲು ಅಫ್ಘಾನಿಸ್ತಾನದಿಂದ ವಿವಿಧ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಹೇಳಿದ್ದಾರೆ.
'ನಾನು ಸ್ವಾತಂತ್ರ್ಯದ ಹಕ್ಕನ್ನು ಹೊಂದಿರುವುದರಿಂದ ಭಾರತದಲ್ಲಿ ಉಳಿಯಲು ನನಗೆ ತುಂಬಾ ಸಂತೋಷವಾಗಿದೆ. ನಾನು ಹೊರಗೆ ಹೋಗಬಹುದು, ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು, ಉತ್ತಮ ಉದ್ಯೋಗವನ್ನು ಪಡೆಯುತ್ತೇನೆ ಮತ್ತು ನನ್ನ ಕುಟುಂಬವನ್ನು ಸಂತೋಷದಿಂದ ಸಾಕಬಹುದು. ಅಫ್ಘಾನಿಸ್ತಾನದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಬದುಕುವುದು ತುಂಬಾ ಕಷ್ಟ, ಏಕೆಂದರೆ ಅವರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ. 2017 ರಿಂದ ನಾನು ಮಂಗಳೂರಿನಲ್ಲೇ ಇದ್ದೇನೆ. 2021 ರಲ್ಲಿ, ನಾನು ಅಫ್ಘಾನಿಸ್ತಾನದಲ್ಲಿ ನನ್ನ ಊರಿಗೆ ಭೇಟಿ ನೀಡಿದ್ದೆ. ಪರಿಸ್ಥಿತಿ ಹದಗೆಡುವ ಮೊದಲು, ನಾನು ಭಾರತಕ್ಕೆ ಮರಳಿದೆ ಎಂದು ಹೇಳಿದ್ದಾರೆ.