ಕಾಸರಗೋಡು, ಡಿ 24 (DaijiworldNews/HR): ಕೇರಳಕ್ಕೆ ಇತ್ತೀಚಿನ ದಿನಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಬೇಕಲ ಬೀಚ್ ಪಾರ್ಕ್ ನಲ್ಲಿ ಅಂತಾರಾಷ್ಟ್ರೀಯ ಬೀಚ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಪ್ರವಾಸೋದ್ಯಮ ವಲಯದ ಮೇಲೆ ಪರಿಣಾಮ ಬೀರಿತ್ತು. ಆದರೆ ಈಗ ಚೇತರಿಕೆ ಕಂಡಿದೆ. ಇದರಿಂದ ವಿದೇಶದಿಂದ ಹಾಗೂ ದೇಶದ ವಿವಿಧೆಡೆಗಳಿಂದ ಕೇರಳಕ್ಕೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ ಎಂದರು.
ವಿಶ್ವದ ಪ್ರವಾಸಿಗರ ಮೆಚ್ಚಿನ 50 ಸ್ಥಳಗಳ ಬಗ್ಗೆ ಟೈಮ್ ಮ್ಯಾಗಸೀನ್ ಕೇರಳವನ್ನೂ ಗುರುತಿಸಿದೆ. ಇದರಿಂದ ವಿದೇಶಿ ಪ್ರವಾಸಿಗರನ್ನು ಕೇರಳಕ್ಕೆ ಹೆಚ್ಚು ಆಕರ್ಷಿತಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ವಿಮಾನ ಪ್ರಯಾಣ ದರ ಏರಿಕೆ ಮುಂದಿನ ದಿನಗಳಲ್ಲಿ ವಿದೇಶಿ ಪ್ರವಾಸಿಗರ ಆಗಮನದ ಮೇಲೆ ಪರಿಣಾಮ ಬೀರಲಿದೆ. ಪ್ರವಾಸಿಗರನನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸಿ ಕೇಂದ್ರಗಳನ್ನು ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಈ ನಿಟ್ಟಿನಲ್ಲಿ ಬೇಕಲ ಬೀಚ್ ಉತ್ಸವ ಆಯೋಜಿಸಲಾಗಿದ್ದು, ಇದೇ ರೀತಿ ಉಳಿದ ಪ್ರವಾಸಿ ಕೇಂದ್ರಗಳಿಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಉದುಮ ಶಾಸಕ ಸಿ.ಎಚ್ ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ರೋಬಾಟಿಕ್ ಷೋವನ್ನು ರಾಜ್ಯ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸಿದರು. ಅಕ್ವಾಟಿಕ್ ಷೋ ವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.
ಇನ್ನು ಶಾಸಕ ಎನ್.ಎ ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ.ಕೆ ರಮೇಂದ್ರನ್, ಮಾಜಿ ಶಾಸಕ ಕೆ.ವಿ ಕುಂಞರಾಮನ್, ಕೆ.ಪಿ ಕುಂಞಕಣ್ಣನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವಿ ಬಾಲಕೃಷ್ಣನ್ ಹಾಗೂ ಇನ್ನಿತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಬಿಆರ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ. ಶಿಜಿನ್ ಸ್ವಾಗತಿಸಿ, ಮೆನೇಜರ್ ಯು.ಎಸ್ ಪ್ರಸಾದ್ ವಂದಿಸಿದರು. ಅಂತಾರಾಷ್ಟ್ರೀಯ ಬೇಕಲ ಬೀಚ್ ಉತ್ಸವ ಜನವರಿ 2 ರ ತನಕ ನಡೆಯಲಿದೆ.