ಉಳ್ಳಾಲ, ಡಿ 24 (DaijiworldNews/HR): ತುಳುನಾಡಿನ ಯುವಕರ ತಲೆಗೆ ಕೋಮು ವಿಷ ಬೀಜ ಬಿತ್ತಿಸಿ ಹೆಣವಾಗಿಸಲಾಗುತ್ತಿದೆ. ಧಾರ್ಮಿಕ ಪೊಲೀಸ್ ಗಿರಿ ನಿರಂತರವಾಗಿ ನಡೆದರೂ ಪೊಲೀಸರು ಆರ್ಎಸ್ಎಸ್ ಏಜೆಂಟರುಗಳಾಗಿ ವರ್ತಿಸುತ್ತಿದ್ದಾರೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದರು.
ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಆಯೋಜಿಸಿದ್ದ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂಘಪರಿವಾರ ಪ್ರೇರಿತ ಗೂಂಡಾಗಿರಿ ವಿರುದ್ಧ ಜನಾಕ್ರೋಶ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಸಂಘಪರಿವಾರ ಯುವಕರ ಉದ್ಯೋಗಕ್ಕಾಗಿ ಮಾತನಾಡದೆ ಅವರ ತಲೆಯಲ್ಲಿ ಕೋಮು ವಿಷಬೀಜಗಳನ್ನು ಬಿತ್ತಿಹಾಕಿ ಬೀದಿ ಹೆಣವಾಗಿಸುತ್ತಿದ್ದಾರೆ. ಅಮಾಯಕರ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ಬಸ್ಸಿನಲ್ಲಿ ಮಹಿಳೆಯೊಬ್ಬರ ಬ್ಯಾಗ್ ಪಡೆದುಕೊಂಡಿದ್ದಕ್ಕೆ ಮುಲ್ಲರಪಟ್ನ ನಿವಾಸಿ ಇಸಾಕ್ ಎಂಬವರಿಗೆ ಬೆನ್ನಲ್ಲಿ ಜಾಗವಿಲ್ಲದಂತೆ ಹಲ್ಲೆ ನಡೆಸಲಾಗುತ್ತದೆ. ಸಂಪರಿವಾರದ ಗೂಂಡಾಗಳ ಮೇಲೆ ಕ್ರಮಕೈಗೊಳ್ಳಬೇಕಾದ ಪೊಲೀಸರು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆರೋಪಿಗಳು ಅಂದು ಸಂಜೆಯೇ ಬೇಲ್ ಪಡೆದುಕೊಂಡು ಹೊರಬರುವಂತಹ ಸ್ಥಿತಿ. ತೆಹೆಲ್ಕಾ ಮಾಧ್ಯಮ ರಹಸ್ಯ ಕಾರ್ಯಾಚರಣೆಯಲ್ಲಿ ಅಂದಿನ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದಂತೆ ಪೊಲೀಸರೆಲ್ಲರೂ ಆರ್ಎಸ್ಎಸ್ ಹಿನ್ನೆಲೆಯವರೆಂದು ಸಾಬೀತಾಗಿದೆ. ಇದೀಗ ಅದು ಸಾಬೀತಾಗುತ್ತಿದೆ ಎಂದರು.
ಇನ್ನು ಖಾಕಿ ಯುನಿಫಾರಂಗೆ ಸಾಮಾನ್ಯ ನಾಗರಿಕರು ಗೌರವ ಕೊಡುತ್ತಾರೆ. ಸಮವಸ್ತ್ರದ ಒಳಗಡೆ ಆರ್ಎಸ್ಎಸ್ ಆಗಿದ್ದಲ್ಲಿ ಜನ ಗೌರವಿಸುವುದಿಲ್ಲ. ಉಳ್ಳಾಲದಲ್ಲಿ ಮರಳು ಮಾಫಿಯಾ, ಜುಗಾರಿ ಮಾಫಿಯಾ, ಡಾಮಾರು ಮಾಫಿಯಾ, ಪೆಟ್ರೋಲ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದ್ದರೂ, ಪೊಲೀಸರು ಚಕಾರವೆತ್ತುತ್ತಿಲ್ಲ. ಆದರೆ ಪ್ರತಿಭಟನೆಗೆ ಅನುಮತಿಯನ್ನು ಕೇಳಿದರೆ ನಿರಾಕರಿಸುತ್ತಿರುವುದು ದುರಂತ. ಬೀದಿಯಲ್ಲಿ ಬಡ ಮನೆಯವರ ಬಿದ್ದಿರುವ ಉದಾಹರಣೆಗಳನ್ನು ತೋರಿಸಿ ಮುಖಂಡರು ಅಧಿಕಾರ, ಹಣ ಮಾಡುತ್ತಿದ್ದರೆ, ಮುಖಂಡರ ಮಕ್ಕಳು ವಿದೇಶದ ವಿ.ವಿಗಳಲ್ಲಿ ಕಲಿಯುತ್ತಿದ್ದಾರೆ. ಜಿಲ್ಲಾ ಬಿಜೆಪಿ, ಸಂಘ ಪರಿವಾರ ತಾನು ನಡೆಸುವುದೇ ಕಾನೂನಲ್ಲ ಅನ್ನುವುದನ್ನು ಅರಿಯಬೇಕಿದೆ ಎಂದಿದ್ದಾರೆ.
ಇಲ್ಲಿ ಕತ್ತಲಾದರೆ ಬೇರೆ ದೇಶದಲ್ಲಿ ಬೆಳಕಾಗುತ್ತದೆ. ಭ್ರಮಾಲೋಕದಿಂದ ಹೊರಬನ್ನಿ. ಸಹಜವಾದ ಸಹಜೀವನ ನಡೆಸಲು ಮುಂದೆ ಬನ್ನಿ. ಚಿಲ್ಲರೆ ರಾಜಕೀಯ ಪೊಲೀಸರು ನಡೆಸಬಾರದು. ಮಾಫಿಯಾ ನಿಯಂತ್ರಿಸಿ, ಜನರಿಗೋಸ್ಕರ ಪೊಲೀಸರ ವಿರುದ್ಧ ಹೋರಾಡಲು ಸನ್ನದ್ಧವಾಗುತ್ತೇವೆ. ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದಿ ಸಂಘಟನೆ ಗಳ ವಿರುದ್ಧ ಡಿವೈಎಫ್ ಐ ಸಮಗ್ರವಾಗಿ ಹೋರಾಡುತ್ತದೆ ಎಂದು ಎಚ್ಚರಿಸಿದರು.
ತೊಕ್ಕೊಟ್ಟು ನಿವಾಸಿ ಅಂಡೆಪಿರ್ಕಿಯೋರ್ವ ಕಮ್ಯುನಿಸ್ಟರನ್ನು ಚೀನಾಗೆ ಬಿಡಲು ಫೇಸ್ ಬುಕ್ ನಲ್ಲಿ ನಿರಂತರವಾಗಿ ಬರೆಯುತ್ತಿದ್ದಾನೆ. ಅಂಡೆಪಿರ್ಕಿಗೆ ಕಮ್ಯುನಿಸ್ಟರ ಕಾನೂನಿನ ತಾಕತ್ತು ಗೊತ್ತಿಲ್ಲ. ಪಕ್ಷದಲ್ಲಿ ಶಾಸಕರು ಬೇಕೆಂದೇನಿಲ್ಲ. ಕಾನೂನಿಗೆ ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧ. ಉಳ್ಳಾಲ ಪೊಲೀಸರು ಅಂಡೆಪಿರ್ಕಿಯ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ನಿಶ್ಚಿತ ಎಂದಿದ್ದಾರೆ.
ಸಿಪಿಐಎಂ ಜಿಲ್ಲಾ ಕರ್ಯಕಾರಿ ಸಮಿತಿ ಸದಸ್ಯ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ವಿಶ್ವಸಂಸ್ಥೆ ವರದಿಯ ಪ್ರಕಾರ ಹಿಂಸೆಯಲ್ಲಿ ದೇಶ ಅಪಘಾನಿಸ್ತಾನ, ಪಾಕಿಸ್ತಾನಕ್ಕಿಂತಲೂ ಕೆಳಗಿದೆ. ರಾಜಕೀಯ ಕಾಳಗಕ್ಕಾಗಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಸುತ್ತಿದೆ. ಗುಜರಾತಿನ ಗೋದ್ರಾ ಗೋದ್ರೋತ್ತರ ಗಲಭೆ ನೆನಪಿಸಿ ವೋಟ್ ಪಡೆದಿದ್ದಾರೆ.ಆದಿಉಡುಪಿಯಲ್ಲಿ ದನದ ವ್ಯಾಪಾರಿ ಹಾಜಬ್ಬ, ಹಸನಬ್ಬ ಬೆತ್ತಲೆಗೊಳಿಸಿ ಮಾಧ್ಯಮಗಳಲ್ಲಿ ವರಿದ ನಡೆಸಿತ್ತು. ಆರ್ ಎಸ್ ಎಸ್ ಮುಖಂಡ ಪ್ರಭಾಕರ್ ಭಟ್ ಅವರು ಚಡ್ಡಿಯೇ ಹಾಕಿರಲಿಲ್ಲ ಅಂದು ಸಮರ್ಥಿಸಿದ್ದರು. ಕೊಣಾಜೆಯ ಕಾರ್ತಿಕ್ ರಾಜ್ನನ್ನು ಸ್ವತ: ತಂಗಿಯೇ ಹತ್ಯೆ ನಡೆಸಿದ್ರೂ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆಂದು ಸಂಸದ ಹೇಳಿ ಗಲಭೆಗೆ ಪ್ರಚೋದಿಸಿದರು. ಸದ್ಯ ಕೋಮುದಂಗೆ ನಡೆಸಲು ಸಾಧ್ಯವಾಗದೆ, ಚಿತ್ರಣ ಬದಲಿಸಿ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ನಡೆಸುತ್ತಿದೆ ಎಂದರು.
ವಕೀಲ ನಿತಿನ್ ಕುಮಾರ್, ಡಿವೈಎಫ್ ಐ ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ, ಸಿಪಿಐಎಂ ಉಳ್ಳಾಲ ವಲಯ ಮಾಜಿ ಕರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಜಿಲ್ಲಾ ಕರ್ಯಕಾರಿ ಸಮಿತಿಯ ಪದ್ಮಾವತಿ ಎಸ್. ಶೆಟ್ಟಿ, ಸಿಪಿಥೈಎಂ ಜಿಲ್ಲಾ ಕರ್ಯದರ್ಶಿ ಜಯಂತ್ ನಾಯ್ಕ್ , ಸುನಿಲ್ ತೇವುಲ, ಎಸ್ ಎಫ್ ಐ ನ ರೇವಂತ್ ಕದ್ರಿ, ಹರೇಕಳ ಗ್ರಾ.ಪಂ ಸದಸ್ಯ ಅಶ್ರಫ್ ಹರೇಕಳ, ರಝಾಕ್ ಮೊಂಟೆಪದವು, ಆಸಿಫ್ ಪಾವೂರು, ಜನಾರ್ದನ ಹರೇಕಳ, ರಿಝ್ವಾನ್ ಹರೇಕಳ, ಬಶೀರ್ ಹರೇಕಳ ಉಪಸ್ಥಿತರಿದ್ದರು.