ಉಳ್ಳಾಲ, ಡಿ 24 ( DaijiworldNews/MS): ವಿದೇಶಿ ವಿದ್ಯಾರ್ಥಿ ಗಳಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಕಾರು ಪರಾರಿಯಾಗುವ ಯತ್ನದಲ್ಲಿದ್ದಾಗ ತಡೆದ ಸ್ಥಳೀಯರು, ಅದನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಲಪಾಡಿ ದೇವಿನಗರ ಎಂಬಲ್ಲಿ ನಡೆದಿದೆ.
ಕೇರಳ ಮೂಲದ ಕಾರು ಮತ್ತು ಅದರ ಚಾಲಕ ಅಹಮ್ಮದ್ ಮುಬಾರಿಷ್ ಎ.ಕೆ ಎಂಬಾತನನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಹಮ್ಮದ್ ಮುಬಾರಿಷ್ ಶುಕ್ರವಾರ ಸಂಜೆ ಕಾರಿನಲ್ಲಿ ಮಂಗಳೂರಿಂದ ಕೇರಳದ ಕಡೆಗೆ ಅತಿ ವೇಗದಿಂದ ಧಾವಿಸುತ್ತಿದ್ದ ಎನ್ನಲಾಗಿದ್ದು ರಾ.ಹೆ. 66 ರ ಕೋಟೆಕಾರು ಹೆದ್ದಾರಿಯಲ್ಲಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ.
ಢಿಕ್ಕಿಯ ರಭಸಕ್ಕೆ ವಿದೇಶಿಯರು ಚಲಾಯಿಸುತ್ತಿದ್ದ ಸ್ಕೂಟರ್ ರಸ್ತೆಗಪ್ಪಳಿಸಿದ್ದು ಸವಾರ ಸೆಟಿದ್ ಬಾಷಾಂಗ್(30) ಗಂಭೀರ ಗಾಯಗೊಂಡು ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಸಹ ಸವಾರ ಅಲಿ ಸಾಗರ್(30) ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ವಿದೇಶಿಗರಾಗಿರುವ ಸ್ಕೂಟರ್ ಸವಾರ, ಸಹ ಸವಾರ ಮಂಗಳೂರು ವಿ.ವಿಯಲ್ಲಿ ವ್ಯಾಸಂಗಕ್ಕೆಂದು ಬಂದಿದ್ದು ದೇರಳಕಟ್ಟೆಯ ಲಾಡ್ಜ್ ನಲ್ಲಿ ತಂಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಚಾಲಕ ಮುಬಾರಿಷ್ ಕಾರು ಢಿಕ್ಕಿ ಹೊಡೆದ ಬಳಿಕ ಕಾರಿನಲ್ಲಿದ್ದ ಯುವತಿಯನ್ನು ತಲಪಾಡಿಯಲ್ಲಿ ಇಳಿಸಿ ಕಾರನ್ನು ದೇವಿಪುರದ ಒಳ ರಸ್ತೆಯಿಂದ ಓಡಿಸಿ ಪರಾರಿಗೆ ಯತ್ನಿಸಿದ್ದು ಆತನನ್ನ ಬೆನ್ನಟ್ಟಿದ ಸಾರ್ವಜನಿಕರು ದೇವಿಪುರ ಮಂಡೆ ಕಟ್ಟ ಎಂಬಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.