ಮೂಡುಬಿದಿರೆ, ಡಿ 24 ( DaijiworldNews/MS): ಕಳೆದ ಹತ್ತು ವರ್ಷಗಳಿಂದ ನೈಸರ್ಗಿಕ ಕ್ರಿಸ್ಮಸ್ ನಕ್ಷತ್ರ ತಯಾರಿಸಿ, ಲೈಫ್ ಸೇವಾ ಸಂಸ್ಥೆ ಈ ಬಾರಿಯೂ ವಿಶೇಷ ವಸ್ತುಗಳಿಂದ ವಿಶಿಷ್ಟ ನಕ್ಷತ್ರ ತಯಾರಿಸಿದ್ದಾರೆ.
ಸಾಸಿವೆ, ಕೊತ್ತಂಬರಿ, ಹುರುಳಿ, ರಾಗಿ ಸೇರಿದಂತೆ ಹಸಿ ಮತ್ತು ಒಣ ಅಡಿಕೆಯಿಂದ ವಿಶಿಷ್ಟ ತಿರುಗುವ ಕ್ರಿಸ್ಮಸ್ ನಕ್ಷತ್ರವನ್ನು ಶಿರ್ತಾಡಿಯ ಲೈಫ್ ಸೇವಾ ಸಂಸ್ಥೆಯವರು ನಿರ್ಮಿಸಿದ್ದಾರೆ. ನಕ್ಷತ್ರವನ್ನು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ನ ಆವರಣದಲ್ಲಿ ಕ್ರಿಸ್ಮಸ್ ಪ್ರಯುಕ್ತ ಡಿ.23 ರಿಂದ ಜ.5 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ.
ನಕ್ಷತ್ರವು 120 ಕೆಜಿ ತೂಕ, 12 ಅಡಿ ಎತ್ತರ, 11 ಅಡಿ ಅಗಲವಿದ್ದು, ನಕ್ಷತ್ರದ ಮಧ್ಯಭಾಗದಲ್ಲಿ ಏಸುಕ್ರಿಸ್ತನ ಹುಟ್ಟನ್ನು ಬಿಂಬಿಸುವ ಬೈಹುಲ್ಲಿನ ಮೇಲ್ಛಾವಣಿ ಹೊಂದಿರುವ ಆಕರ್ಷಕ ಗೋದಳಿಯನ್ನು ಅಳವಡಿಸಲಾಗಿದೆ.ಈ ನಕ್ಷತ್ರವು ಚಲಿಸುವ ಮಾದರಿಯಲ್ಲಿ ರಚಿಸಲಾಗಿದ್ದು, ಇದಕ್ಕಾಗಿ 1 ಎಚ್.ಪಿ ಮೋಟಾರ್ ಹಾಗೂ ವಾಹನದ ಹೌಸಿಂಗ್ ಅನ್ನು ಅಳವಡಿಸಲಾಗಿದೆ. ನಿರಂತರ 3 ವಾರಗಳ ಕಾಲ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಜೋಯೆಲ್ ಸಿಕ್ವೇರಾ ಈ ನಕ್ಷತ್ರವನ್ನು ತಯಾರಿಸುವಲ್ಲಿ ಶ್ರಮಿಸಿದ್ದಾರೆ. ಅವರ ಜೊತೆಗೆ ಸಂಸ್ಥೆಯ ಸದಸ್ಯರಾದ ನವೀನ್ ಶೆಟ್ಟಿ ಶಿರ್ತಾಡಿ, ಸಿಪ್ರಿಯಾನ್ ಡಿಸೋಜ ಶಿರ್ತಾಡಿ, ರಮೇಶ್ ಶೆಟ್ಟಿ ಮಂಗಳೂರು, ನಾಗರಾಜ್ ಅಲಂಗಾರು ಸಹಕರಿಸಿದ್ದಾರೆ. ಸಂಸ್ಥೆಯು ಕಳೆದ 10 ವರ್ಷಗಳಿಂದ ಬೃಹತ್ ಗಾತ್ರದ ನಕ್ಷತ್ರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಪ್ರತಿ ವರ್ಷ ವಿಶಿಷ್ಟ ಬಗೆಯ ವಸ್ತುಗಳನ್ನು ಬಳಸಿ ನಕ್ಷತ್ರ ತಯಾರಿಸುತ್ತಿದೆ.
ಈ ಬಾರಿಯ ನಕ್ಷತ್ರಕ್ಕೆ 10 ವಿವಿಧ ಬಗೆಯ ವಸ್ತುಗಳನ್ನು ಬಳಸಲಾಗಿದೆ. 1 ಕೆಜಿ ಸಾಸಿವೆ, 1 ಕೆಜಿ ಕೊತ್ತಂಬರಿ, 1 ಕೆಜಿ ಹುರುಳಿ, 1 ಕೆಜಿ ರಾಗಿ, 2 ಕೆಜಿ ನೆಲಗಡಲೆ, 20 ಕೆಜಿ ಹಸಿ ಅಡಿಕೆ, 2 ಕೆಜಿ ಒಣ ಅಡಿಕೆ, ಮೋಟಾರ್, ವಾಹನದ ಹೌಸಿಂಗ್, ಮರದ ತುಂಡುಗಳನ್ನು ಬಳಸಿ ನಿರ್ಮಿಸಿರುವ ಈ ನಕ್ಷತ್ರವು ವಿದ್ಯುತ್ ಚಾಲಿತವಾಗಿ ತಿರುಗುತ್ತ, ದೀಪಗಳಿಂದ ಅಲಂಕೃತಗೊಳಿಸಿ ಆಕರ್ಷಣೀಯವೆನಿಸಿದೆ.
"ಕೋಮು ಸೌಹಾರ್ದತೆಯ ಮೂಲ ಉದ್ದೇಶದಿಂದ ಈ ನಕ್ಷತ್ರವನ್ನು ಸರ್ವಧರ್ಮೀಯರ ಸಹಕಾರದಿಂದ ನಿರ್ಮಿಸಲಾಗಿದೆ. ಪರಸ್ಪರ ಶಾಂತಿ, ನೆಮ್ಮದಿ ಅಗತ್ಯವನ್ನು ಇದು ಸಾರಿ ಹೇಳುತ್ತದೆ"- ಪ್ರಸನ್ನ ಜೋಯೆಲ್ ಸಿಕ್ವೇರಾ, ಲೈಫ್ ಸೇವಾ ಸಂಸ್ಥೆ