ಮಂಗಳೂರು, ಡಿ 23 (DaijiworldNews/SM): ಯಕ್ಷಗಾನ ನಡೆಯುತ್ತಿದ್ದಾಗ ರಂಗಸ್ಥಳದಲ್ಲೇ ಹೃದಯಾಘಾತಕ್ಕೀಡಾಗಿ ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು(58) ಅವರು ನಿಧನರಾಗಿದ್ದು, ಇದಕ್ಕೆ ಯಕ್ಷ ಲೋಕವೇ ಕಂಬನಿ ಮಿಡಿದಿದೆ. ಮಂಗಳೂರಿನಲ್ಲಿ ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿದ ಭಾಗವತ ಸತೀಶ್ ಪಟ್ಲ ಅವರು, ಯಕ್ಷಗಾನ ಕಲಾವಿದರು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಗುರುವಪ್ಪ ಬಾಯಾರು ಅವರ ರೀತಿಯಲ್ಲಿ ಅನೇಕ ಕಲಾವಿದರು ಕಲಾ ಮಾತೆಯ ಪೂಜೆಯೊಂದಿಗೆ ಪ್ರಾಣಬಿಟ್ಟಿದ್ದಾರೆ. ಕಲಾವಿದರಿಗೆ ಇಂತಹ ಸಂಕಷ್ಟ ಎದುರಾಗಬಾರದು. ಆರೋಗ್ಯದ ಕಡೆಗೆ ಕಲಾವಿದರು ಗಮನ ನೀಡಬೇಕು ಎಂದು ದೈಜಿವರ್ಲ್ಡ್ ಗೆ ಭಾಗವತ ಸತೀಶ್ ಪಟ್ಲ ಪ್ರತಿಕ್ರಿಯೆ ನೀಡಿದ್ದಾರೆ.
ರಂಗಸ್ಥಳದಲ್ಲಿ ಕಲಾವಿದರಿಗೆ ಈ ರೀತಿಯಾಗಬಾರದಿತ್ತು. ಈ ವಿಚಾರ ನಮಗೆ ತುಂಬಾ ನೋವನ್ನುಂಟು ಮಾಡಿದೆ. ಎಲ್ಲಾ ಕಲಾವಿದರು ಎಚ್ಚರಿಕೆಯಿಂದ ಆರೋಗ್ಯದ ಕಡೆಗೆ ಹೆಚ್ಚಿನ ಮುತುವರ್ಜಿವಹಿಸಬೇಕು. ಪ್ರಕ್ಷಕರನ್ನು ಮನೋರಂಜಿಸುವ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.
ವೇದಿಕೆಯಲ್ಲೇ ಕುಸಿದುಬಿದ್ದ ಶಿಶುಪಾಲ ಪಾತ್ರಧಾರಿ ಗುರುವಪ್ಪ ಬಾಯಾರು ನಿಧನ:
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ ಗುರುವಪ್ಪ ಬಾಯಾರು(58)ಮೃತ ಕಲಾವಿದ. ಕಟೀಲಿನ ಕ್ಷೇತ್ರದ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿದ್ದು ಈ ಸಂದರ್ಭ ಗುರುವಪ್ಪ ಬಾಯರು ಶಿಶುಪಾಲನ ಪಾತ್ರಧಾರಿಯಾಗಿ ಪಾತ್ರ ನಿರ್ವಹಿಸುತ್ತೊದ್ದರು. ಪ್ರಸಂಗದ ಕೊನೆ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಇನ್ನೊಬ್ಬರು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಾಯಾಘಾತವಾಗಿ ರಂಗಸ್ಥಳದಿಂದ ಕೆಳಗಡೆ ಕುಸಿದು ಬಿದ್ದಿದ್ದರು.
ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ಕೊಡ್ಯೊಯ್ದರೂ ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ. ಅಷ್ಟಮಂಗಲ ಪ್ರಸಂಗ ಬರೆದಿದ್ದ ಅವರು ಕಳೆದ ಮಳೆಗಾಲದಲ್ಲಿ ಮಂಗಳೂರು ಪುರಭವನದಲ್ಲಿ ಆಡಿಸಿದ್ದರು. ನಾನಾ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು 2013 ಕಟೀಲು ಮೇಳಕ್ಕೆ ಸೇರಿದ್ದರು. ತ್ರಿಜನ್ಮ ಮೋಕ್ಷ ಯಕ್ಷಗಾನ ಪ್ರದರ್ಶನದಲ್ಲೇ ಶಿಶುಪಾಲನಾಗಿದ್ದ ಗುರುವಪ್ಪ ಬಾಯಾರು ಮೋಕ್ಷ ಪಡೆದಿದ್ದಾರೆ.