ಮಂಗಳೂರು, ಡಿ 23 (DaijiworldNews/SM): ಸುರತ್ಕಲ್ ಮಾರುಕಟ್ಟೆಯಲ್ಲಿ ಕಾಮಗಾರಿಯನ್ನ ಮುಂದುವರೆಸಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅರೆಬರೆಯಾಗಿ ಭೂಮಿಯನ್ನ ಬಿಟ್ಟುಕೊಟ್ಟಿರುವುದು ಮಾತ್ರವಲ್ಲದೆ ಸರಿಯಾದ ಯೋಜನಾಬದ್ಧ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಇದರಿಂದಾಗಿ ಬೃಹತ್ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ.
ಇದೀಗ ಶಾಸಕ ಡಾಕ್ಟರ್ ಭರತ್ ಶೆಟ್ಟಿ ಅವರ ಮನವಿಯ ಮೇರೆಗೆ ಹೆಚ್ಚುವರಿ 82 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಿದಾನ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸುರತ್ಕಲ್ ಬೃಹತ್ ಮಾರುಕಟ್ಟೆಯ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಶಾಸಕ ಡಾಕ್ಟರ್ ಭರತ್ ಶೆಟ್ಟಿ ಅವರು ನಗರಾಭಿವೃದ್ಧಿ ಸಚಿವರಿಂದ ಪ್ರಶ್ನೋತ್ತರ ವೇಳೆಯಲ್ಲಿ ಸದ್ಯ ಮಾರುಕಟ್ಟೆಯ ಅಭಿವೃದ್ಧಿ ಮಾಡುವ ಬಗ್ಗೆ ಪ್ರಶ್ನೆಯನ್ನು ಕೇಳಿದರು. ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದು ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ಉತ್ತರಿಸಿದರು.
ಇನ್ನು ಸದನದಲ್ಲಿ ಸಚಿವ ಬೈರತಿ ಬಸವರಾಜ್ ನೀಡಿರುವ ಉತ್ತರದಿಂದ ಮಾಜಿ ಶಾಸಕ ಮೊಯ್ದಿನ್ ಬಾವಾ ಗರಂ ಆಗಿದ್ದಾರೆ. ಭರತ್ ಶೆಟ್ಟಿ ಶಾಸಕರಾದ ಬಳಿಕ ಕಾಮಗಾರಿ ಹಳ್ಳಹಿಡಿದಿದೆ. ಆದರೆ, ಸದನದಲ್ಲಿ ಕಾಂಗ್ರೆಸ್ ವಿರುದ್ಧ ಗೂಬೆ ಕೂರಿಸುವ ಯತ್ನ ನಡೆಸಲಾಗಿದೆ. ಬಿಜೆಪಿಯ ಸುಳ್ಳಿನ ರಾಜಕೀಯವಾಗಿದೆ. ಪವಿತ್ರ ಸದನದಲ್ಲಿ ಸುಳ್ಳಿನ ಕಂತೆಯನ್ನು ಬಿಜೆಪಿ ಸುರಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸುರತ್ಕಲ್ ನಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮಾಜಿ ಶಾಸಕ ಮೊಯ್ದಿನ್ ಬಾವಾ ನೀಡಿದ್ದಾರೆ.