ಸುಬ್ರಹ್ಮಣ್ಯ,ಮಾ 07 (MSP): ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಕುಕ್ಕೆ ಶ್ರೀ ಸಂಪುಟ ನರಸಿಂಹ ಮಠಕ್ಕೆ ಹಸ್ತಾಂತರ ಮಾಡುವಂತೆ ಮಠದ ಪರ ನೀಡಿರುವ ನೊಟೀಸ್ ವಿರೋಧಿಸಿ ಹಸ್ತಾಂತರ ಮಾಡದಂತೆ ಸರ್ಕಾರವನ್ನು ಒತ್ತಾಯಿಸಿ ಮಾ.07ರ ಗುರುವಾರ ಕುಕ್ಕೆ ಸುಬ್ರಹ್ಮಣ್ಯ ಬಂದ್ಗೆ ಕುಕ್ಕೆ ಭಕ್ತರ ಹಿತ ರಕ್ಷಣಾ ವೇದಿಕೆ ಕರೆ ನೀಡಿದ ಸುಬ್ರಹ್ಮಣ್ಯ ಬಂದ್ ಸಂಪೂರ್ಣ ಯಶಸ್ವಿಯಾಗಿದೆ
ಇಂದಿನ ಬಂದ್ ಕಾನೂನು ಬಾಹಿರವಾಗಿದ್ದು, ಬಂದ್ಗೆ ತಡೆ ನೀಡುವಂತೆ ಮಠದ ಪರ ವಕೀಲರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯವು ಬಂದ್ ಮಾಡದಂತೆ ತಡೆಯುವುದನ್ನು ನಿರಾಕರಿಸಿತ್ತು. ಆದರೆ ಬಲವಂತದ ಬಂದ್ಗೆ ಅವಕಾಶ ನೀಡದಂತೆ ತೀರ್ಪು ನೀಡಿದೆ. ಬಂದ್ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದಂತೆ, ಕಾನೂನಿನ ತೊಡಕಿಗೆ ಅಡ್ಡಿಯಾಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಕ್ಕೆ ಒಳಪಟ್ಟ ಕೆಲವು ಅಂಗಡಿ- ಮುಂಗಟ್ಟುಗಳು ಮಾತ್ರ ಎಂದಿನಂತೆ ತೆರೆದಿದ್ದು, ಉಳಿದಂತೆ ಸುಬ್ರಹ್ಮಣ್ಯ ಪರಿಸರದಲ್ಲಿರುವ ಅಂಗಡಿ ಮುಂಗಟ್ಟು ಮುಚ್ಚಿ ಸಂಪೂರ್ಣ ಬಂದ್ ಆಗಿದೆ. ಸುಬ್ರಹ್ಮಣ್ಯ ಪೇಟೆಯಲ್ಲಿ ಜನಸಂಚಾರ ವಿರಳವಾಗಿದ್ದು, ದೂರದೂರಿನ ಭಕ್ತರು ಮಾತ್ರ ಯಾವುದೇ ಅಡೆತಡೆಗಳಿಲ್ಲದೆ ದೇವಸ್ಥಾನಕ್ಕೆ ಬೇಟಿ ನೀಡುತ್ತಿದ್ದಾರೆ.
ಬಂದ್ ಶಾಂತಿಯುತ ರೀತಿಯಲ್ಲಿ ನಡೆಸಲು ಸಂಘಟನೆ ನಿರ್ಧರಿಸಿದ್ದು, ಬಸ್ ಸಂಚಾರ ಎಂದಿನಂತಿದೆ. ಗುರುವಾರ ಸಂಜೆ ಕುಕ್ಕೆ ಶ್ರೀ ಭಕ್ತ ಹಿತ ರಕ್ಷಣಾ ವೇದಿಕೆ ವತಿಯಿಂದ ರಥ ಬೀದಿಯಲ್ಲಿ ಜನಾಂದೋಲನ ಸಭೆ ನಡೆಯಲಿದೆ.