ಮಂಗಳೂರು, ಡಿ 23 (DaijiworldNews/DB): ಸುರತ್ಕಲ್ ಮಾರುಕಟ್ಟೆಗೆ ಸಂಬಂಧಿಸಿದಂತೆ ಶಾಸಕ ಡಾ. ಭರತ್ ವೈ. ಶೆಟ್ಟಿ ಅವರು ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಸಚಿವ ಬೈರತಿ ನಾಗರಾಜ್ ಅವರ ಉತ್ತರ ಎರಡೂ ಮೊದಲೇ ಸಿದ್ದಪಡಿಸಿಕೊಂಡಿದ್ದ ಪ್ರಶ್ನೆ ಮತ್ತು ಉತ್ತರ ಆಗಿವೆ ಎಂದು ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಆರೋಪಿಸಿದ್ದಾರೆ.
ಡಿಸೆಂಬರ್ 23ರ ಗುರುವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನಕ್ಕೆ ಬರುವ ಮೊದಲು ಇಬ್ಬರೂ ಪ್ರಶ್ನೆ ಮತ್ತು ಉತ್ತರವನ್ನು ಸಿದ್ದಪಡಿಸಿಕೊಂಡಿಟ್ಟಿದ್ದರು ಎಂದರು.
ಸಚಿವರು ಹೇಳಿಕೊಂಡಂತೆ ಸುರತ್ಕಲ್ ಮಾರುಕಟ್ಟೆಗೆ ಯಾವುದೇ ಬಜೆಟ್ ನಿರ್ಬಂಧವಿಲ್ಲ. ಮೊದಲ ಹಂತದಲ್ಲಿ 61 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಮಗಾರಿಯನ್ನು ಶಾಸಕ ಡಾ. ಭರತ್ ವೈ. ಶೆಟ್ಟಿ ತಡೆದಿದ್ದರು. ಇದೀಗ ಸುರತ್ಕಲ್ ಮಾರುಕಟ್ಟೆಯ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸುವುದು ಶೆಟ್ಟಿ ಅವರ ಜವಾಬ್ದಾರಿಯಾಗಿದೆ ಎಂದವರು ವಿವರಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಮೌನ ವಹಿಸಿದ್ದ ಭರತ್ ಶೆಟ್ಟಿ ಅವರು ಇದೀಗ ರಾಜ್ಯ ವಿಧಾನಸಭಾ ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಸುರತ್ಕಲ್ ಮಾರುಕಟ್ಟೆ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದವರು ಆಪಾದಿಸಿದರು.
ಮುಂದಿನ ಚುನಾವಣೆಯ ನಂತರ ಅವರು ಶಾಸಕರಾಗುವುದಿಲ್ಲ. ಬಿಜೆಪಿ ಕೂಡಾ ಅಧಿಕಾರದಲ್ಲಿ ಇರುವುದಿಲ್ಲ. ಕಾಮಗಾರಿಗೆ 80 ಕೋಟಿ ರೂ. ಮಂಜೂರಾಗಿದೆ ಎಂದು ಸಚಿವರು ಹೇಳಿಕೊಂಡಿದ್ದಾರೆ. ಈಗ ನಿಧಿ ಬಿಡುಗಡೆಗೆ ಪ್ರಸ್ತಾವನೆ ಕಳುಹಿಸಿದರೆ ಏನು ಪ್ರಯೋಜನ? ಈಗಲೇ ಕಾಮಗಾರಿ ಆರಂಭವಾಗಲಿ. ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಅಪೂರ್ಣವಾಗಿದೆ. ಅಲ್ಲದೆ ಗುತ್ತಿಗೆದಾರರು ಕಮಿಷನ್ ನೀಡಿಲ್ಲ ಎಂದು ಬಾವಾ ಆರೋಪಿಸಿದರು.
ಮಂಜೂರಾದ 60 ಕೋಟಿ ರೂ. ನಿಧಿ ಈಗ 80 ಕೋಟಿ ರೂ.ಗೆ ತಲುಪಿದ್ದು, 20 ಕೋಟಿ ವ್ಯತ್ಯಾಸವಾಗಿದೆ. ಇದಕ್ಕೆ ಶಾಸಕರೇ ಉತ್ತರ ಕೊಡಬೇಕು. ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಚಿವರಿಗೆ ಪ್ರಶ್ನೆ ಕೇಳಿದ ಮಾತ್ರಕ್ಕೆ ಜನ ನಂಬುವುದಿಲ್ಲ ಎಂದು ಇದೇ ವೇಳೆ ಕುಟುಕಿದರು.
ಶಾಸಕ ಭರತ್ ಶೆಟ್ಟಿ ವಿರುದ್ಧ ಧ್ವನಿ ಎತ್ತುತ್ತೇವೆ. ಇದನ್ನು ಸಾರ್ವಜನಿಕರ ಗಮನಕ್ಕೆ ತರಲು ಡಿಸೆಂಬರ್ 31ರಂದು ನಾವು ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ ಎಂದು ಇದೇ ವೇಳೆ ಬಾವಾ ತಿಳಿಸಿದರು.