ಕಾಸರಗೋಡು,ಮಾ 07 (MSP): ದೈವ ದೇವರನ್ನು ಭಕ್ತಿಯಿಂದ ಓಲೈಸಲು ಎಂದು ಅರಣ್ಯ ಪ್ರದೇಶದಲ್ಲಿ ಬೇಟೆಗೆ ಹೋದ ಐವರು ಬೇಟೆಗಾರರಿಗೆ, ’ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು ” ಎಂದು ಹೇಳಿ ಜಾಮೀನು ಮಂಜೂರು ಮಾಡಿ ನ್ಯಾಯಾಧೀಶರು ಆದೇಶ ನೀಡಿದ ಅಪರೂಪದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಬೇಟೆಗೆಂದು ಕಾಡಿಗೆ ತೆರಳಿ ಅರಣ್ಯ ಇಲಾಖೆಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಐವರು ಬೇಟೆಗಾರರು ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ನ್ಯಾಯಾಧೀಶರು, ಆರೋಪಿಗಳಿಗೆ ಕೌನ್ಸೆಲಿಂಗ್ ನೀಡಿ ಆರೋಪಿಗಳಿಗೆ ಇವರೆಲ್ಲರಿಗೂ ಒಂದು ತಿಂಗಳ ಕಾಲ ಈ ಕಡ್ಡಾಯವಾಗಿ ಆಸ್ಪತ್ರೆ ಸೇವೆ ಮಾಡುವಂತೆ ಆದೇಶ ನೀಡಿದ್ದಾರೆ.
ಘಟನೆಯ ವಿವರ:
ಕಣ್ಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಫೆ.28ರಂದು, ಬೋವಿಕ್ಕಾನದ ಕಾನತ್ತೂರು ಪಯರ್ಪಳ್ಳ ಎಂಬ ಅರಣ್ಯ ಪ್ರದೇಶದಿಂದ ಐದು ಜನ ಬೇಟೆಗಾರರನ್ನು ಬಂಧಿಸಿದ್ದರು. ಈ ಸಂದರ್ಭ ಬೇಟೆಗಾರರು ಬಳಕೆ ಮಾಡಿದ್ದ ಕಾರು ಹಾಗೂ ಏಳು ಕೋವಿಗಳನ್ನೂ ಇಲಾಖೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದರು. ಈ ಬಗ್ಗೆ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ನಾವೆಲ್ಲಾ ವಯನಾಟು ಕುಲವನ್ ದೈವದ ಉತ್ಸವದ ಪ್ರಯುಕ್ತ, ಸಾಂಪ್ರದಾಯಿವನ್ನು ಪಾಲಿಸಲೆಂದು ಕಾಡಿಗೆ ಬೇಟೆಗೆ ತೆರಳಿದ್ದೆವು ಎಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದರು. ಇವರೆಲ್ಲರು ನೀಡಿದ ಹೇಳಿಕೆಯಂತೆ ನ್ಯಾಯಾಧೀಶರು ಸಂಬಂಧಪಟ್ಟ ದೈವಸ್ಥಾನದ ಆಡಳಿತಾಧಿಕಾರಿಗಳು, ಆರೋಪಿಗಳ ಬಂಧುಗಳ ಸೇರಿದಂತೆ ಸುಮಾರು 30 ಮಂದಿ ನ್ಯಾಯಾಲಯಕ್ಕೆ ಕರೆಸಿ ವಿಚಾರಣೆ ನಡೆಸಿದ್ದರು
ನಿಮ್ಮ ಉದ್ದೇಶವು ’ಸಂಪ್ರಾದಾಯ ಪಾಲಿಸಲು ಇರಬಹುದು ’ ಆದರೆ ಹಿಂದೆ ಕೃಷಿ ನಾಶಪಡಿಸುವ ಕಾಡು ಮೃಗಗಳನ್ನು ಬೇಟೆ ಆಡುವ ಪದ್ಧತಿ ಇತ್ತು. ಆದರೆ ಪ್ರಸ್ತುತ ಬೇಟೆಗೆ ಕಾನೂನು ಪ್ರಕಾರ ನಿಷೇಧವಿದೆ.ದೈವಾರಾಧನೆಗೆ ಕಾನೂನು ಬಾಹಿರವಲ್ಲದ ಬದಲಿ ವ್ಯವಸ್ಥೆ ಏರ್ಪಡಿಸುವುದು ಸೂಕ್ತ. ಮೃಗಗಳ ಗೊಂಬೆ ತಯಾರಿಸಿ ಸಾಂಕೇತಿಕವಾಗಿ ಬೇಟೆ ಸಂಪ್ರದಾಯ ಕ್ರಮ ಅಥವಾ ಇನ್ನಿತರ ಕ್ರಮ ಅನುಸರಿಸಬಹುದು. ದೈವಸ್ಥಾನ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರ ತಳೆದು ಅದನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದರು.
ಮಾತ್ರವಲ್ಲದೆ ಪರವಾನಗಿ ಇಲ್ಲದ ಕೋವಿ ವಶದಲ್ಲಿಟ್ಟುಕೊಳ್ಳುವುದು ಭಾರತದಲ್ಲಿ ಅಪರಾಧ.ಅಮೆರಿಕಾ ಸಂಸ್ಕೃತಿ ನಮಗೆ ಬೇಡ ಎಂದ ನ್ಯಾಯಾಧೀಶರು, ಆರೋಪಿಗಳ ಇಬ್ಬರು ಸಂಬಂಧಿ ವ್ಯಕ್ತಿಗಳ ಆಧಾರದಲ್ಲಿ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿರು. ಷರತ್ತಿನ ಪ್ರಕಾರ ಪ್ರತಿಯೊಬ್ಬ ಆರೋಪಿಯೂ ಪ್ರತಿನಿತ್ಯ 30 ದಿನಗಳ ತನಕ ತಲಾ ಒಂದು ಗಂಟೆ ಕಾಲ ಬಂದಡ್ಕ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವಂತೆ ಆದೇಶ ನೀಡಿದರು.ಇದರೊಂದಿಗೆ ಪ್ರಕರಣ ಇತ್ಯರ್ಥವಾಗುವ ತನಕ ಪ್ರತಿ 2ನೇ ಮತ್ತು 4ನೇ ಶನಿವಾರದಂದು ಕಾಸರಗೋಡು ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಹಾಜರಾಗಿ ಸಹಿ ಹಾಕುವಂತೆ ಆದೇಶ ನೀಡಿದ್ದಾರೆ.