ಮಂಗಳೂರು, ಡಿ. 22 (DaijiworldNews/SM): ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಗೆ ವಿರೋಧ ಇದೆ ಎಂದು ಹೇಳಿಕೆ ನೀಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುವುದು ಬೇಡ. ಅದನ್ನು ರದ್ದುಪಡಿಸುವ ಬಗ್ಗೆ ಕ್ರಮ ವಹಿಸಲಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಇನ್ನೂ ರದ್ದಾಗಿಲ್ಲ. ಆ ಸಮಸ್ಯೆ ಇನ್ನೂ ಜೀವಂತ ಇದೆ. ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದು ಆಕ್ಷೇಪವನ್ನು ಕೇಂದ್ರಕ್ಕೆ ರಾಜ್ಯ ಸರಕಾರ ಕಳುಹಿಸಿದೆ. ಅದನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಿ ಎಂದು ಅವರು ಆಗ್ರಹಿಸಿದರು.
ಅರಣ್ಯ ಸಂರಕ್ಷಣೆಗಾಗಿ ಗಾಡ್ಗೀಳ್ ವರದಿ ಮಂಡಿಸಿದಾಗ ಅರಣ್ಯದಂಚಿನ ಜನರು ವಿರೋಧ ಮಾಡಿದಾಗ ಅಂದಿನ ಸಕಾರ ಕಸ್ತೂರಿನ ರಂಗನ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ಗಾಡ್ಗೀಳ್ ವರದಿಯ ಸರತಿ ತಪ್ಪುಗಳನ್ನು ಸರಿಪಡಿಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿಯು ಕರ್ನಾಟಕ, ತಮಿಳುನಾಢು, ಕೇರಳ, ಆಂಧ್ರ, ತೆಲಂಗಾಣ, ಗೋವಾ ರಾಜ್ಯಗಳಿಗೆ ಸಂಬಂಧಿಸಿ ವರದಿ ತಯಾರಿಸಿದ್ದನ್ನು ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪ ಸಲ್ಲಿಸಲು ಸೂಚಿಸಿತ್ತು. ಆಗ ವಿಪಕ್ಷದಲ್ಲಿದ್ದ ಬಿಜೆಪಿ ಭಾರೀ ಗುಲ್ಲೆಬ್ಬಿಸಿತ್ತು. ಬಳಿಕ ನಾಲ್ಕೈದು ಕರಡು ಅಧಿಸೂಚನೆ ಪ್ರಕಟವಾಗಿತ್ತು. ಬಳಿಕ ಕೇಂದ್ರದಲ್ಲಿ ಸರಕಾರ ಬದಲಾವಣೆಯಾಯಿತು. ಆಗ ರಾಜ್ಯದಲ್ಲಿ ನಾನು ಅರಣ್ಯ ಸಚಿವನಾಗಿದ್ದೆ. ಹಿಂದೆ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಿ ಜನರನ್ನು ಬೀದಿಗೆ ತಳ್ಳುತ್ತಾರೆ ಎಂದಿದ್ದ ಬಿಜೆಪಿಯವರು ಈ ಸಂದರ್ಭದಲ್ಲಿ ರಾಜ್ಯ ಸರಕಾರ ಸಲ್ಲಿಸಿದ ವರದಿಯೇ ಸರಿ ಇಲ್ಲ ಎಂದರು. ಬಳಿಕ ಅಂತಿಮವಾಗಿ ನಮ್ಮ ಅವಧಿಯ ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದು ಕೇಂದ್ರಕ್ಕೆ ಪತ್ರ ಕಳುಹಿಸಿತ್ತು. ಆ ಬಳಿಕವೂ ಮೂರ್ನಾಲ್ಕು ಬಾರಿ ಕರಡು ಅಧಿಸೂಚನೆ ಪ್ರಕಟವಾಗಿವೆ ಎಂದು ತಿಳಿಸಿದರು. ಇದೀಗ ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಗೆ ವಿರೋಧ ಇದೆ ಎಂದು ಪತ್ರಿಕೆಗಳಲ್ಲಿ ಹೇಳಿಕೆ ನೀಡಿರುವುದನ್ನು ನೋಡಿದ್ದೇನೆ. ಅದನ್ನು ಜಾರಿ ಮಾಡುವುದು ಕೇಂದ್ರ ಸರಕಾರ. ರಾಜ್ಯದಲ್ಲಿ ನಮ್ಮ ಸರಕಾರ ಇದ್ದಾಗ ಈ ಬಗ್ಗೆ ವಿವಿಧ ಕಡೆ ಪ್ರತಿಭಟನೆ, ಹೋರಾಟ ನಡೆಸಿದ್ದ ಬಿಜೆಪಿ, ಇಂದು ಡಬ್ಬಲ್ ಇಂಜಿನ್ ಸರಕಾರ ಇರುವಾಗ ಅದನ್ನು ರದ್ದುಪಡಿಸಲು ಕ್ರಮ ವಹಿಸುವುದು ಬಿಟ್ಟು ವಿರೋಧ ಎಂದು ಹೇಳುವುದು ರಾಜಕೀಯ ಪ್ರೇರಿತ ಎಂದು ರಮಾನಾಥ ರೈ ಹೇಳಿದರು