ಉಡುಪಿ, ಡಿ. 22 (DaijiworldNews/SM): ಪರ್ಕಳ - ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಮಣಿಪಾಲ - ಉಡುಪಿ ಸಂಪರ್ಕಿಸುವ ವಾಹನಗಳ ಸುಗಮ ಸಂಚಾರಕ್ಕೆ ಪ್ರಸ್ತುತ ಇರುವ ಕೆಳಪರ್ಕಳದ ರಸ್ತೆಯನ್ನು ಸರಿಪಡಿಸಲು ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ನೀಡಿರುವ ಸೂಚನೆಯಂತೆ ಇಂದು ದಿನಾಂಕ 22-12-2022 ರಂದು ಮಣಿಪಾಲ - ಉಡುಪಿ ಸಂಪರ್ಕಿಸುವ ಕೆಳಪರ್ಕಳ ರಸ್ತೆ ಕಾಮಗಾರಿ ಆರಂಭಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 160 A ಇದರ ಪರ್ಕಳ ದಿಂದ ಮಣಿಪಾಲ ಸಂಪರ್ಕಿಸುವ ಮುಖ್ಯ ರಸ್ತೆಯ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಉಡುಪಿ - ಮಣಿಪಾಲ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಕೆಳಪರ್ಕಳ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ಕಷ್ಟ ಸಾಧ್ಯವಾಗಿ ಪ್ರತಿನಿತ್ಯ ವಾಹನದಟ್ಟನೆಯಿಂದ ಸಾರ್ವಜನಿಕರು ಸಂಕಷ್ಟ ಪಡುತ್ತಿದ್ದರು.
ಇದನ್ನು ಗಮನಿಸಿದ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ದಿನಾಂಕ ದಿನಾಂಕ 21-12-2022 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುವವರೆಗೆ ಪ್ರಸ್ತುತ ಇರುವ ಕೆಳಪರ್ಕಳದ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ತಿಳಿಸಿದ್ದರು.