ಮಂಗಳೂರು, ಡಿ 22 (daijiworldNews/HR): ಜ್ಯೋತಿಯ ಲಕ್ಷ್ಮೀದಾಸ್ ಜ್ಯುವೆಲ್ಲರಿ ಬಳಿಯಲ್ಲಿ ಡಿಸೆಂಬರ್ 19 ರಂದು ತೆರೆದ ಚರಂಡಿಗೆ ಬಿದ್ದ ಮಹಿಳೆಯನ್ನು ಖಾಸಗಿ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿದೆ.
ಮೇರ್ಲಪದವು ನಿವಾಸಿ ಪ್ರೆಸಿಲ್ಲಾ ಪೆರೇರಾ (57) ತೆರೆದ ಚರಂಡಿಗೆ ಬಿದ್ದಿದ್ದು, ಹತ್ತಿರದ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರನ್ನು ಸಂಪರ್ಕಿಸಿ ಮನೆಗೆ ಮರಳಿದ್ದರು. ಆದರೆ ಡಿಸೆಂಬರ್ 20 ರಂದು ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟು ವಾಂತಿ ಮತ್ತು ದೇಹ ನೋವು ಕಾಣಿಸಿಕೊಂಡಿದ್ದು, ಅವರ ಮಗಳು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ವರದಿ ಸೂಚಿಸಿತ್ತು.
ಇನ್ನು ಪ್ರೆಸಿಲ್ಲಾ ಐಸಿಯುನಲ್ಲಿದ್ದು, ಮುಂದಿನ 3-4 ದಿನಗಳವರೆಗೆ ವೀಕ್ಷಣೆಯಲ್ಲಿದ್ದಾರೆ. ಅವರ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರೆಸಿಲ್ಲಾ ಅವರ ಪತಿ ಚಾಲಕರಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.