ಮಂಗಳೂರು, ಡಿ 21 (DaijiworldNews/PoliticalDesk): ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ಪೂರ್ವಭಾವಿಯಾಗಿ ಈಗಾಗಲೇ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು, ಟಿಕೆಟ್ ಅಕಾಂಕ್ಷಿಗಳು ತಮ್ಮ- ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಟಿಕೆಟ್ ಲಭ್ಯತೆಯ ಜೊತೆಗೆ ಮತದಾರರಲ್ಲಿ ಗೆಲುವಿನ ಕುದುರೆ ಏರುವ ಅಭ್ಯರ್ಥಿಗಳು ಯಾರಿರಬಹುದು ಎಂಬ ಕುರಿತ ಚರ್ಚೆಯೂ ಬಹಳಷ್ಟು ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಬರುವುದಾದರೆ ಬಿಜೆಪಿಯಿಂದ ಹಾಲಿ ಶಾಸಕ ಭರತ್ ಶೆಟ್ಟಿ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನಿಂದ ಎರಡು ಮೂರು ಪ್ರಬಲ ಅಕಾಂಕ್ಷಿಗಳ ಹೆಸರುಗಳು ಚಾಲ್ತಿಯಲ್ಲಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕರಾದ ಮೊಯ್ದೀನ್ ಬಾವಾರ ಪರ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ಚುನಾವಣೆಯಲ್ಲಿ ಮೊಯ್ದೀನ್ ಬಾವಾ ಸೋಲು ಕಾಂಗ್ರೆಸ್ ಕಾರ್ಯಕರ್ತರನ್ನು ಪುನರ್ ಚಿಂತನೆಗೊಳಪಡಿಸಿದೆ ಎಂಬುದಕ್ಕೆ ಕ್ಷೇತ್ರದೆಲ್ಲೆಡೆ ಇದೀಗ ಅವರಿಗೆ ದೊರೆಯುವ ವಿಶೇಷ ಸ್ವೀಕಾರ್ಹತೆಯೇ ಪ್ರಮುಖ ಸಾಕ್ಷಿಯಾಗಿದೆ. ಕೆಲ ಕಾರಣಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಆಹೋರಾತ್ರಿ ದುಡಿದ ಶಾಸಕರೋರ್ವರನ್ನು ಗೆಲ್ಲಿಸಲಾಗಿಲ್ಲ ಎಂಬ ಪಶ್ಚಾತ್ತಾಪ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಲವಾಗಿದೆ. ಸಭೆಗಳಲ್ಲಿ ಸಾರ್ವಜನಿಕವಾಗಿ ಕ್ಷೇತ್ರದ ಕಾರ್ಯಕರ್ತರು ಈ ಮಾತುಗಳನ್ನು ಹೇಳಿದ್ದೂ ಇದೆ. ಅಭಿವೃದ್ಧಿಯ ವಿಚಾರದಲ್ಲಿ ಯಾವತ್ತೂ ರಾಜಿ ಮಾಡದ ಮೊಯ್ದೀನ್ ಬಾವಾರಿಗೆ ಮಣೆ ಹಾಕುತ್ತಾರೆ ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ಪಕ್ಷದಲ್ಲೂ ಹೊಸ ಹುರುಪನ್ನು ಮೂಡಿಸಿವೆ.
ಮಾಜಿ ಶಾಸಕರಾಗಿದ್ದರೂ ಕಳೆದ ಐದು ವರ್ಷಗಳಲ್ಲಿ ಮೊಯ್ದೀನ್ ಬಾವಾರವರು ಕ್ಷೇತ್ರದಲ್ಲಿ ಜನಪರ ಕೆಲಸಗಳೊಂದಿಗೆ, ಜನತೆಯ ಧ್ವನಿಯಾಗಿ ಸಕ್ರೀಯರಾಗಿದ್ದರು. ಮಾಜಿಯಾಗಿದ್ದರೂ ಶಾಸಕರಾದ ಮೊಯ್ದೀನ್ ಬಾವಾರವರು ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿತು ತಕ್ಷಣ ಸ್ಪಂದಿಸಿ ಇವರೇ ನಮ್ಮ ಶಾಸಕ ಎಂಬ ಪ್ರತೀತಿ ಮೂಡಿಸುವಲ್ಲಿ ಸಫಲರಾಗಿದ್ದರು. ಈಗಲೂ ಕ್ಷೇತ್ರದ ಜನತೆಗೆ ತಮ್ಮ ಕಷ್ಟ-ಕಾರ್ಪಣ್ಯಗಳ ಸಂದರ್ಭದಲ್ಲಿ ಮೊದಲು ನೆನಪಾಗುವುದು ಮೊಯ್ದೀನ್ ಬಾವಾ ಅವರ ಹೆಸರು ಹಾಗೂ ಸಹಾಯ ಹಸ್ತದ ಮನಸ್ಸು. ದಿನವಿಡೀ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಜನರೊಂದಿಗೆ ಬೆರೆಯುವ ಬಾವಾರ ಗೆಲುವು ಜಿಲ್ಲೆಯ ಕಾಂಗ್ರೆಸ್ ನೇತೃತ್ವಕ್ಕೂ ಅತೀ ಅಗತ್ಯದ್ದಾಗಿದೆ.
ಮೊಯ್ದೀನ್ ಬಾವಾರ ಶಾಸಕತ್ವದ ಅವಧಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿ ವಿಶೇಷವಾಗಿತ್ತು. ಪ್ರತಿ ಕೇರಿಗಳಿಗೂ ರಸ್ತೆ, ನೀರು, ವಿಧ್ಯುತ್, ತಲುಪುವಂತೆ ಮಾಡಿದ ಕೀರ್ತಿ ಬಾವಾರಿಗೆ ಸೇರಿದ್ದು. ಜೊತೆಗೆ ಅಗತ್ಯಕ್ಕೆ ಬೇಕಾದ ಸೇತುವೆಗಳನ್ನು, ತ್ವರಿತ ಸರಕಾರಿ ಸೇವೆಗಳನ್ನು, ಧರ್ಮ-ಜಾತಿ- ರಾಜಕೀಯ ರಹಿತವಾಗಿ ಅನುದಾನಗಳನ್ನು ಜನತೆಗೆ ತಲುಪಿಸುವಲ್ಲಿ ಮೊಯ್ದೀನ್ ಬಾವಾ ನೀಡಿದ ನೇತೃತ್ವ ಜನರ ಮನಸ್ಸುಗಳಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಮೊಯ್ದೀನ್ ಬಾವಾ ಅವರಿಗೆ ಎಂದು ಚುನಾವಣೆಯಲ್ಲಿ ಸೋಲಾಯಿತೋ ಅಂದಿನಿಂದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನೇತಾರರ ಆಶೀರ್ವಾದದೊಂದಿಗೆ ಮುಂದೆ ಹೀಗಾಗಬಾರದು ಎಂದು ಪ್ರತಿಜ್ನೆ ಮಾಡಿದ್ದರು.
"ಕಾಂಗ್ರೆಸ್ ಯಾವತ್ತೂ ಪ್ರಜಾಸತ್ತತೆಗೆ ಆದ್ಯತೆ ನೀಡುವ ಪಕ್ಷ. ಚುನಾವಣೆ ಎಂದಾಕ್ಷಣ ಟಿಕೆಟ್ ಅಕಾಂಕ್ಷಿಗಳು ಇರಲೇ ಬೇಕು. ಕಾಂಗ್ರೆಸ್ ಪಕ್ಷವು ಅಕಾಂಕ್ಷಿಗಳಿಗೆ ತಮ್ಮ ಅಪೇಕ್ಷೆಯನ್ನು ನಾಯಕತ್ವದ ಮುಂದೆ ಪ್ರಸ್ತುತ ಪಡಿಸಲು ಅವಕಾಶವನ್ನೂ ನೀಡುತ್ತಿದೆ. ಆದುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟು ಆಕಾಂಕ್ಷಿಗಳೆಂದರೆ ಅವರು ಪಕ್ಷದ ಪರವಾಗಿರುವವರೇ ಹೊರತು ಪರಸ್ಪರ ಸ್ಪರ್ಧಿಗಳಲ್ಲ. ಕಾಂಗ್ರೆಸ್ ಕಾರ್ಯಕರ್ತನಾಗಿ, ನಾಯಕನಾಗಿ ಹಾಗೂ ಮಾಜಿ ಶಾಸಕನಾಗಿ ಕ್ಷೇತ್ರದ ಜನತೆಯೊಂದಿಗೆ ಅತೀ ಹೆಚ್ಚಿನ ಸಂಪರ್ಕವನ್ನಿಡಲು ನನಗೆ ಸಾಧ್ಯವಾಗಿದೆ. ಪಕ್ಷದ ನಾಯಕತ್ವಕ್ಕೂ ಇದರ ಸ್ಪಷ್ಟ ಅರಿವಿದೆ. ಐದು ವರ್ಷಗಳ ಮೊದಲು ನಾನು ಅಡಿಪಾಯ ಹಾಕಿದ ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲು ಕಟಿಬದ್ಧನಾಗಿದ್ದೇನೆ. ಈ ಚಿಂತನೆಯ ಹಿಂದೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಆಶೀರ್ವಾದ ಹಾಗೂ ಪ್ರೋತ್ಸಾಹವಿದೆ" ಎಂದು ಸ್ಪರ್ಧೆಯ ಕುರಿತು ಕೇಳಿದ ಪ್ರಶ್ನೆಗೆ ಮೊಯ್ದೀನ್ ಬಾವಾ ಉತ್ತರಿಸುತ್ತಾರೆ.
ಏನಿದ್ದರೂ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಮೊಯ್ದೀನ್ ಬಾವಾ ಅವರ ಮರು ನಾಯಕತ್ವಕ್ಕೆ ಹಾತೊರೆಯುತ್ತಿದೆ ಎಂದು ಭಾಸವಾಗುತ್ತಿದೆ.