ಉಡುಪಿ, ಡಿ 21 ( DaijiworldNews/MS): ಇಲ್ಲಿನ ಶಿವಳ್ಳಿಯಲ್ಲಿ ಡಿ.11ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಸಾಧಿಕ್ ಉಲ್ಲಾ (35) ಬಂಧಿತ ಆರೋಪಿ. ಈತನನ್ನು ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಶಿಕಾರಿಪುರದ ತನ್ನ ಮನೆಯಲ್ಲಿ ಇಟ್ಟಿದ್ದ ಕಳವು ಮಾಡಿಕೊಂಡು ಹೋಗಿದ್ದ ಡೈಮಂಡ್ ಉಂಗುರ, ಚಿನ್ನಾಭರಣ, ಬೆಳಿಯ ಗಟ್ಟಿ, ಬೆಳ್ಳಿಯ ಆಭರಣ ಹಾಗೂ ಚಿನ್ನದ ಲೇಪನ ಇರುವ ಒಟ್ಟು 4.35 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ
ಹೆಡ್ ಕಾನ್ಸ್ಟೆಬಲ್ ಸತೀಶ್ ಬೆಳ್ಳೆ, ಕಾನ್ಸ್ಟೆಬಲ್ ಎಸ್.ಆನಂದ್ ಕಳ್ಳನ ಬಗ್ಗೆ ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಸೋಮವಾರ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಆರೋಪಿ ಸಾಧಿಕ್ ಉಲ್ಲಾನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಡುಪಿ ನಗರ ಠಾಣೆಯ ಇನ್ಸ್ಪೆಕ್ಟರ್ ಡಿ.ಆರ್.ಮಂಜಪ್ಪ ನೇತೃತ್ವದಲ್ಲಿ ಆರೋಪಿ ಪತ್ತೆ ಕಾರ್ಯ ನಡೆದಿದ್ದು ಪಿಎಸ್ಐ ಟಿ.ಎಂ.ಮಹೇಶ್, ವಾಸಪ್ಪ ನಾಯ್ಕ್, ಸಿಬ್ಬಂದಿ ಸತೀಶ್ ಬೆಳ್ಳೆ, ಆನಂದ, ರಿಯಾಝ್ ಅಹ್ಮದ್, ವಿಶ್ವನಾಥ ಶೆಟ್ಟಿ, ಕಿರಣ, ಶಿವಕುಮಾರ್, ದಿನೇಶ್, ನಿತಿನ್ ಕುಮಾರ್ ಸಹಕರಿಸಿದ್ದಾರೆ.