ಕಾಸರಗೋಡು, ಡಿ 21 ( DaijiworldNews/MS): ಆರು ತಿಂಗಳ ಹಿಂದೆ ಕಾಸರಗೋಡಿನ ಮನೆ ತೊರೆದಿರುವ ಕುಟುಂಬವೊಂದು ಶಂಕಿತವಾಗಿದ್ದು, ಅವರ ಉದ್ದೇಶವೇನು ಎಂಬುದನ್ನು ಪತ್ತೆ ಹಚ್ಚಲು ಭದ್ರತಾ ಏಜೆನ್ಸಿಗಳು ಯತ್ನಿಸುತ್ತಿವೆ. ಕಾಸರಗೋಡಿನಿಂದ ದುಬೈಗೆ ಹೋಗಿ ಅಲ್ಲಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಆರು ಮಂದಿಯನ್ನು ಯೆಮನ್ ನಲ್ಲಿ ಪತ್ತೆ ಹಚ್ಚಲಾಗಿದೆ.
ತೃಕ್ಕರಿಪುರ ಪರಿಸರದ ಒಂದೇ ಕುಟುಂಬದ ಪತಿ, ಪತ್ನಿ ಮತ್ತು ಅವರ ನಾಲ್ವರು ಮಕ್ಕಳನ್ನು ಒಳಗೊಂಡ ಆರು ಮಂದಿ ಇತ್ತೀಚೆಗೆ ದುಬೈಗೆ ಹೋಗಿದ್ದರು. ಅಲ್ಲಿಂದ ಅವರು ಕಳೆದ ಎರಡು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ನಡೆಸಿದ ಸಮಗ್ರ ತನಿಖೆಯಲ್ಲಿ ಈ ಎಂಟು ಮಂದಿಯನ್ನು ಯೆಮನ್ ನಲ್ಲಿ ಪತ್ತೆಹಚ್ಚಲಾಗಿದೆ.
ಇದರ ನಿಗೂಢತೆಯನ್ನು ಬೇಧಿಸಲು ಕೇಂದ್ರ ರಾಜ್ಯ ಹಾಗೂ ಗುಪ್ತಚರ ತನಿಖಾ ಇಂಟಲಿಜೆನ್ಸ್ ಬ್ಯೂರೋ ತಂಡಗಳು ತೃಕ್ಕರಿಪುರಕ್ಕೆ ತೆರಳಿ ಸಮಗ್ರ ತನಿಖೆ ಆರಂಭಿಸಿದೆ.ನಾಪತ್ತೆಯಾದವರ ಪೂರ್ಣ ಮಾಹಿತಿ , ಹಿನ್ನಲೆ, ವಿದೇಶಕ್ಕೆ ತೆರಳಲು ಹಾಗೂ ಅಲ್ಲಿದ್ದ ಯೆಮನ್ ಗೆ ಹೋದ ಉದ್ದೇಶದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ವರ್ಷಗಳ ಹಿಂದೆ ಮಹಿಳೆಯರು ಮಕ್ಕಳ ಸಹಿತ 11 ಮಂದಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಅವರು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸಿರಿಯಾ ಮತ್ತು ಅಪಘಾನಿಸ್ತಾನದಲ್ಲಿನ ಶಿಬಿರದಲ್ಲಿರುವ ಬಗ್ಗೆ ಬಳಿಕ ತಿಳಿದು ಬಂದಿತ್ತು.