ಮಂಗಳೂರು, ಡಿ 21 (DaijiworldNews/DB): ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ಹೋಗುವ ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಪಾಲಿಕೆಯ ಅನುಮತಿ ಪಡೆಯದೆ ಕೇಬಲ್ ದುರಸ್ತಿಗೆ ಹೊಂಡ ಅಗೆದ ಏರ್ಟೆಲ್ ಕಂಪೆನಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಕೋರಿ ಮಂಗಳೂರು ಮಹಾನಗರ ಪಾಲಿಕೆಯಿಂದ ಬಂದರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ಹೋಗುವ ರಸ್ತೆ ಬದಿ ಲಕ್ಷ್ಮೀದಾಸ್ ಜ್ಯುವೆಲ್ಲರ್ಸ್ ಮುಂಭಾಗ ಪಾದಚಾರಿ ಮಾರ್ಗದಲ್ಲಿ ಕೇಬಲ್ ದುರಸ್ತಿಗಾಗಿ ಹೊಂಡೆ ಅಗೆಯಲಾಗಿದೆ. ಇದಕ್ಕೆ ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಅಲ್ಲೆ, ಹೊಂಡ ಅಗೆಯುವ ಸಮಯದಲ್ಲಿ ಮತ್ತು ಕೇಬಲ್ ದುರಸ್ತಿಯಾದ ಬಳಿಕವೂ ಯಾವುದೇ ಸುರಕ್ಷತಾ ಕ್ರಮಗಳನ್ನು ಕಂಪೆನಿ ತೆಗೆದುಕೊಂಡಿಲ್ಲ. ಹೊಂಡ ಮುಚ್ಚದೇ ಇರುವುದರಿಂದ ಡಿಸೆಂಬರ್ 19ರಂದು ಮಹಿಳೆಯೊಬ್ಬರು ಈ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸದ್ಯ ಈ ಹೊಂಡವನ್ನು ಮಹಾನಗರ ಪಾಲಿಕೆಯಿಂದಲೇ ಮುಚ್ಚಲಾಗಿದೆ. ಯಾವುದೇ ಅನುಮತಿ ಪಡೆಯದೆ ಪಾಲಿಕೆಯ ರಸ್ತೆಯನ್ನು ಅಗೆದಿರುವುದರಿಂದ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿರುವುದರಿಂದ ಏರ್ಟೆಲ್ ಕಂಪೆನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಒತ್ತಾಯಿಸಿದ್ದಾರೆ.