ಬೈಂದೂರು, ಮಾ 06(SM): ನನೆಗುದಿಗೆ ಬಿದ್ದಿರುವ ನಾಗೂರು-ಹೇರೂರು ರಸ್ತೆಯ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಜನರ ಬೇಡಿಕೆ ಬಗ್ಗೆ ಪತ್ರಕರ್ತರಿಗೆ ವಿವರ ನೀಡಿದ ಹೇರೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ೫ ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ನಡೆದಾಡಲು ಅಸಾಧ್ಯವಾಗುವ ರೀತಿಯಲ್ಲಿ ಹೊಂಡಗುಂಡಿಗಳು ಉಂಟಾಗಿವೆ. ಇದರ ದುರಸ್ತಿಗೆ ಎರಡು ವರ್ಷಗಳಿಂದ ಜನ ಆಗ್ರಹಿಸುತ್ತಲೇ ಬಂದಿದ್ದಾರೆ. ಇಲ್ಲಿ ಅನುಮತಿ ಪಡೆದು ಓಡಾಡುತ್ತಿದ್ದ ಎರಡು ಬಸ್ಗಳು ಇದೇ ಕಾರಣಕ್ಕೆ ಓಡಾಟ ನಿಲ್ಲಿಸಿವೆ. ಸಂಜೆಯ ಬಳಿಕ ಇಲ್ಲಿ ಆಟೊ ಓಡಿಸುವುದಿಲ್ಲ. ಇಡೀ ರಸ್ತೆಯಲ್ಲಿ ಧೂಳು ಏಳುತ್ತಿದೆ. ಯಡಕಂಟ, ಉಪ್ರಳ್ಳಿ, ಮೇಕೋಡು, ಹೇರೂರು, ನೂಜಾಡಿ, ತಂಕಬೆಟ್ಟು, ಹಳಗೇರಿಯ 4000 ಕುಟುಂಬಗಳು, ರಸ್ತೆಯ ಅಕ್ಕಪಕ್ಕ ಇರುವ 3 ಹಿರಿಯ ಪ್ರಾಥಮಿಕ, 2 ಕಿರಿಯ ಪ್ರಾಥಮಿಕ ಶಾಲೆಗಳ, 4 ಅಂಗನವಾಡಿಗಳ ಸುಮಾರು 300 ಮಕ್ಕಳು ಈ ರಸ್ತೆಯನ್ನು ಪ್ರತಿನಿತ್ಯ ಅವಲಂಬಿಸಿದ್ದಾರೆ. ಇವುಗಳ ಜತೆಗೆ ರಸ್ತೆ ಬದಿಯ ಮನೆ, ಅಂಗಡಿಗಳು ಧೂಳಿನ ಸ್ನಾನ ಮಾಡುತ್ತಿವೆ. ಓಡಾಡುವವರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕಾಗಿದೆ. ರಸ್ತೆಯ ಸ್ಥಿತಿ ಸಹಿಸಲು ಅಸಾಧ್ಯ ಎನ್ನುವ ಮಟ್ಟ ತಲಪಿದೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯ ಮುನ್ನ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿ ಈ ರಸ್ತೆಗೆ 3 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದರು. ಚುನಾವಣೆಯಲ್ಲಿ ಅವರು ಸೋತು, ಬಿ. ಎಂ. ಸುಕುಮಾರ ಶೆಟ್ಟಿ ಶಾಸಕರಾದರು. ಸರ್ಕಾರವೂ ಬದಲಾಯಿತು. ರಸ್ತೆಯನ್ನು ಎರಡು ಭಾಗಗಳಲ್ಲಿ ದುರಸ್ತಿ ಮಾಡಲು ಒಟ್ಟು ರೂ 2.4 ಕೋಟಿ ಮೊತ್ತದ ಅಂದಾಜು ತಯಾರಿಸಿ, ಟೆಂಡರು ಕರೆಯಲಾಯಿತು. ಆದರೆ ಯಾವುದೋ ಕಾರಣದಿಂದ ಟೆಂಡರು ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗುತ್ತಿದೆ. ದುರಸ್ತಿ ಕಾರ್ಯ ತಕ್ಷಣ ಆರಂಭವಾಗದೆ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾದರೆ ದುರಸ್ತಿ ಕಾರ್ಯ ಮಳೆಗಾಲದ ಬಳಿಕ ಆರಂಭವಾಗಬೇಕಾಗುತ್ತದೆ. ಅಲ್ಲಿಯ ತನಕ ತಡೆದುಕೊಳ್ಳುವ ತಾಳ್ಮೆ ಜನರಿಗಿಲ್ಲ. ಚುನಾವಣೆಗೆ ಮುನ್ನ ಕಾಮಗಾರಿ ನಡೆಸದ್ದಾರೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.