ಮಂಗಳೂರು, ಮಾ.6(AZM): 0-5 ವರ್ಷದ ಒಳಗಿನ ಮಕ್ಕಳಿಗೆ ಮಾ.10ರಂದು ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣರವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಹಾಲಿ ಇರುವ 5 ತಾಲೂಕುಗಳಲ್ಲಿ 0-5 ವರ್ಷದೊಳಗಿನ 1,49,562 ಮಕ್ಕಳನ್ನು ಗುರುತಿಸಲಾಗಿದ್ದು, ಮಾರ್ಚ್ 10ರಂದು ಸಾರ್ವತ್ರಿಕ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಬೂತ್ ಗಳ ಜೊತೆಗೆ 7 ಮೊಬೈಲ್ ತಂಡ, 26 ಟ್ರಾನ್ಸಿಟ್ ತಂಡಗಳು ಕಾರ್ಯ ನಿರ್ವಹಿಸಲಿದೆ ಹಾಗೂ ಮಾ.11,12 ರಂದು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮಾ.13ರಂದು ನಗರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು,ಈ ವರ್ಷ ಒಂದು ಬಾರಿ ಮಾತ್ರ ನಡೆಯಲಿದೆ. ಈ ಹಿನ್ನೆಲೆಯಲ್ಲಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ನಿರೋಧಕ ಹನಿ ಹಾಕಿಸುವ ಅಗತ್ಯವಿದೆ ಎಂದರು.
ಇನ್ನು 1999ರಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ ಎಂದು ರಾಮಕೃಷ್ಣರವರು ತಿಳಿಸಿದ್ದಾರೆ.