ಬ್ರಹ್ಮಾವರ, ಡಿ 20 (DaijiworldNews/DB): ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ಹಾಗೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 7 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯ ಕುಮಾರ್ ಶೆಟ್ಟಿ (28) ಬಂಧಿತ ಆರೋಪಿ. ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ 30 ಸಾವಿರ ರೂ. ಮೌಲ್ಯದ ಕೆಎ-20-ಇಪಿ-6201ನೇ ಹೋಂಡಾ ಮ್ಯಾಟ್ರಿಕ್ಸ್ ಸ್ಕೂಟರ್, ಕಳವು ಮಾಡಿದ 4,64,700 ರೂ. ಮೌಲ್ಯದ ಚಿನ್ನಾಭರಣಗಳು, 2080 ರೂ. ಮೌಲ್ಯದ ಬೆಳ್ಳಿ ನಾಣ್ಯಗಳು,
9 ಸಾವಿರ ರೂ. ಮೌಲ್ಯದ 1 ಸೀರೆ, ಕಳವು ಮಾಡಿದ ಕಾಳುಮಣಸಿನ ಮಾರಾಟದಿಂದ ಪಡೆದ 84,000 ರೂ. ನಗದು, 2,800 ರೂ. ಮೌಲ್ಯದ ಒಂದು ಗ್ಯಾಸ್ ಸಿಲಿಂಡರ್ನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಎಚ್. ಅವರ ಆದೇಶದಂತೆ ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಬ್ರಹ್ಮಾವರ ಠಾಣಾ ಪಿಎಸ್ಐ ಮುಕ್ತಾಬಾಯಿ, ಸಿಬಂದಿಗಳಾದ ವೆಂಕಟ್ರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮಹಮ್ಮದ್ ಅಜ್ಮಲ್ ಅವರ ತಂಡದೊಂದಿಗೆ ಕಾರ್ಯಾಚರಣೆಗಿಳಿದು ರಾತ್ರಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಆರೋಪಿಗಳು, ಜೈಲಿನಿಂದ ಬಿಡುಗಡೆಗೊಂಡ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಿ ಅವರ ಚಲನವಲನಗಳ ಕುರಿತು ನಿಗಾ ವಹಿಸಿದ್ದರು.
ಡಿಸೆಂಬರ್ 19ರಂದು ಸಂಜೆ ನೀಲಾವರ ಕ್ರಾಸ್ ಬಳಿ ಕಳ್ಳತನವೊಂದರ ಹಳೆಯ ಆರೋಪಿ ಕಾಡೂರು ಗ್ರಾಮ ದ ಬಾಯರ್ಬೆಟ್ಟುವಿನ ಕವಿಜಯಕುಮಾರ್ ಶೆಟ್ಟಿಯನ್ನು ನಿಲ್ಲಿಸಿ ಆತನ ಸ್ಕೂಟರ್ನ್ನು ಪರಿಶೀಲಿಸಿದಾಗ ಕಳ್ಳತನಕ್ಕೆ ಬೇಕಾದ ಸಲಕರಣೆಗಳು ಪತ್ತೆಯಾಗಿದ್ದವು. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯ ವಿವಿಧ ಕಳವು ಪ್ರಕರಣದಲ್ಲಿ ಬಾಗಿಯಾಗಿರುವುದಾಗಿ ಗೊತ್ತಾಗಿತ್ತು.
ಕಳೆದ ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಮಧ್ಯಾವಧಿಯಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್ ಅವರ ಹಳೇ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಸುಮಾರು 280 ಕೆಜಿ ತೂಕದ140000 ರೂ. ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಈತ ಕಳವು ಮಾಡಿದ್ದ.
ಕಳೆದ ಜುಲೈನಲ್ಲಿ ರಾತ್ರಿ ನಡೂರು ಗ್ರಾಮದ ನಡೂರು ಪಟೇಲ್ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಂದು ಇಂಡೇನ್ ಕಂಪೆನಿಯ ಗ್ಯಾಸ್ ಸಿಲಿಂಡರ್ ಕಳವುಗೈದಿದ್ದ. ಅದೇ ತಿಂಗಳಲ್ಲಿ ಯಡ್ತಾಡಿ ಗ್ರಾಮದ ದಾಲಾಡಿಯಲ್ಲಿರುವ ವಾಣಿ ಭಂಡಾರಿ ಅವರ ಮನೆಯಲ್ಲಿ ರಾತ್ರಿ ಸಮಯ ಲೈಟ್ ಇಲ್ಲದೇ ಇದ್ದುದನ್ನು ಗಮನಿಸಿ ಮುಖ್ಯ ದ್ವಾರದ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು 504000 ರೂ. ಮೌಲ್ಯದ ಚಿನ್ನಾಭರಣ ಹಾಗೂ15000 ರೂ. ನಗದನ್ನು ಕಳವು ಮಾಡಿದ್ದ. ಇನ್ನು ಕಳೆದ ನವೆಂವರ್ ತಿಂಗಳಿನಲ್ಲಿ ಕೋಟ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಮಾನ್ಯ ಶಾಲೆಯ ಎದುರು ಇರುವ ಸುಜಾತ ಶೆಟ್ಟಿ ಅವರ ಮನೆ ಕಳ್ಳತನ, ಆರೂರು ಗ್ರಾಮದ ಮೇಲಡ್ಪು ಭಾಸ್ಕರ ಶೆಟ್ಟಿಯವರ ಮನೆಯಲ್ಲಿ ಲೈಟ್ ಇಲ್ಲದಿರುವುದು ಕಂಡು ಮನೆಯ ಬಾಗಿಲನ್ನು ಮುರಿದು ಅಂದಾಜು 31000 ರೂ. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಮತ್ತು ಸೀರೆ ಹಾಗೂ 5000 ರೂ.ಗಳನ್ನು ಕಳವು ಮಾಡಿದ್ದ.
ಈತ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ1 ಕಳ್ಳತನ ಪ್ರಕರಣ ನಡೆಸಿರುವುದು ಪತ್ತೆಯಾಗಿದೆ. ಈ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 2, ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ 4, ಚಿಕ್ಕಮಂಗಳೂರು ಜಿಲ್ಲೆ ಎನ್ ಆರ್ ಪುರ ಠಾಣೆಯಲ್ಲಿ 1, ಹರಿಹರ ಪೊಲೀಸ್ ಠಾಣೆಯಲ್ಲಿ 1, ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯಲ್ಲಿ 1, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ 2 ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ1 ಕಳವು ಪ್ರಕರಣ ಈತನ ಮೇಲೆ ಈ ಹಿಂದೆ ದಾಖಲಾಗಿದ್ದವು. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಜಾಮೀನು ರಹಿತ ವಾರಂಟ್ ಕೂಡಾ ಜಾರಿಯಾಗಿದೆ.