ಕುಂದಾಪುರ, ಮಾ 06(SM): ಗೋಳಿಯಂಗಡಿ ಮಾರುತಿ ಜುವೇಲರ್ಸ್ ಚಿನ್ನ ಹಾಗೂ ಬೆಳ್ಳಿ ಆಭರಣ ಮಳಿಗೆಗೆ ಸೋಮವಾರ ರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಅಭರಣ ಹಾಗೂ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಗೋಳಿಯಂಗಡಿಯಲ್ಲಿ ಗೋಪಾಲ ಆಚಾರ್ಯ ಎನ್ನುವವರು ಕಳೆದ ಕೆಲವು ವರ್ಷಗಳಿಂದ ಮಾರುತಿ ಜುವೇಲರ್ಸ್ ಚಿನ್ನ ಹಾಗೂ ಬೆಳ್ಳಿ ಆಭರಣ ಮಳಿಗೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಆಭರಣ ಮಳಿಗೆಗೆ ಶಟರ್ ಲಾಕ್, ಸಿಸಿ ಕ್ಯಾಮರ್, ಸೇಫ್ ಲಾಕರ್ ವ್ಯವಸ್ಥೆ ಮಾಡಿ ಕೊಂಡಿದ್ದಾರೆ. ಮಾರ್ಚ್ 6ರಂದು ರಾತ್ರಿ ಅಭರಣ ಮಳಿಗೆಯನ್ನು ಮಾಲಕರು ಭದ್ರತೆಯಲ್ಲಿ ಮುಚ್ಚಿ ಮನೆಗೆ ಹೋಗಿದ್ದರು. ಈ ನಡುವೆ ರಾತ್ರಿ ವೇಳೆಯಲ್ಲಿ ಖದೀಮರು ಕೈಚಳಕ ತೋರಿದ್ದು ಚಿನ್ನಾಭರಣ ಕದ್ದೊಯ್ದಿದ್ದಾರೆ.
ಕಳ್ಳರು ಮಾರುತಿ ಜುವೇಲರ್ಸ್ ಹೊರ ಭಾಗದ ಬಾಗಿಲಿಗೆ ಹಾಕಿದ ಬೀಗವನ್ನು ಗ್ಯಾಸ್ ಕಟರ್ ಮೂಲಕ ತುಂಡರಿಸಿದ್ದಾರೆ. ಶೇಟರ್ ಬಾಗಿಲಿನ ಬದಿಗೆ ಹಾಕಿದ ಬೀಗಗಳನ್ನು ತುಂಡು ಮಾಡಿ, ಗ್ಯಾಸ್ ಕಟರ್ ಬಳಸಿ ಸೆಂಟರ್ ಲಾಕ್ ಜಖಂ ಗೊಳಿಸಿ ಬಾಗಿಲು ತೆರೆದು ಒಳಪ್ರವೇಶಿಸಿದ್ದಾರೆ. ಅಂದಾಜು 3 ಲಕ್ಷ ಮೌಲ್ಯದ ಬೆಳ್ಳಿ ಅಭರಣಗಳು, ಕಂಪ್ಯೂಟರ್,ಹಾರ್ಡ್ಡಿಸ್ಕ್, ಸಿಸಿಕ್ಯಾಮರ, ಡಿವಿಆರ್, ಸ್ಕೇಲ್ ಸೇರಿದಂತೆ ಅಂದಾಜು 75 ಸಾವಿರ ಮೌಲ್ಯದ ಸೂತ್ತುಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಳ್ಳತನ ನಡೆದಿದೆ.
ಒಳಗಡೆ ಕೋಣೆಯಲ್ಲಿ ಚಿನ್ನಾಭರಣಗಳನ್ನು ಇಡಲಾದ ಸೇಫ್ ಲಾಕರ್ ಸುತ್ತ ಗ್ಯಾಸ್ ಕಟರ್ ಬಳಸಿ ಕತ್ತರಿಸಿದರೂ ತೆರೆಯಲಾಗದಿದ್ದರಿಂದ ಚಿನ್ನಾಭರಣ ಕಳ್ಳತನ ಮಾಡುವಲ್ಲಿ ವಿಫಲರಾಗಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರೀಶಿಲನೆ ನಡೆಸಿದರು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ಕುಮಾರ್, ಶಂಕರನಾರಾಯಣ ಪೊಲೀಸ್ ಠಾಣೆ ಉಪನೀರಿಕ್ಷಕ ಕೆ.ಪ್ರಕಾಶ, ಬೈಂದೂರು ಪೊಲೀಸ್ ಠಾಣೆ ಉಪನೀರಿಕ್ಷಕ ಪರಮೇಶ್ವರ ಆರ್ ಗುನಗಾ, ಕಂಡ್ಲೂರು ಪೊಲೀಸ್ ಠಾಣೆ ಉಪನೀರಿಕ್ಷಕ ಶ್ರೀಧರ ನಾಯ್ಕ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.