ಮಂಗಳೂರು, ಡಿ 19 (DaijiworldNews/DB): ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಕೀರ್ಣದ ಆವರಣದಲ್ಲಿ ಡಿಸೆಂಬರ್ 21ರಿಂದ 27ರವರೆಗೆ ನಡೆಯುವ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಜಿಲ್ಲೆಯಲ್ಲಿಯ ಎಲ್ಲಾ ಸರ್ಕಾರಿ, ಸರ್ಕಾರೇತರ ಉದ್ದಿಮೆಗಳು, ಕೈಗಾರಿಕೆಗಳು, ವಿವಿಧ ಸಂಸ್ಥೆಗಳು ಉದಾರ ಮನಸ್ಸಿನಿಂದ ಧನ ಸಹಾಯ ಮಾಡುವಂತೆ ಸಂಸದ ನಳಿನ್ ಕುಮಾರ್ ಕಟೀಲು ಮನವಿ ಮಾಡಿದರು.
ಡಿಸೆಂಬರ್ 19ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಈ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್, ಪ್ರವಾಹ ಸೇರಿದಂತೆ ಹಲವಾರು ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಸರ್ಕಾರಿ, ಸರ್ಕಾರೇತರ ಉದ್ದಿಮೆಗಳು ಹಾಗೂ ವಿವಿಧ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಸಹಾಯ ಹಸ್ತ ನೀಡಿವೆ. ಇದೇ ಪ್ರಪ್ರಥಮ ಬಾರಿಗೆ ದೇಶದಲ್ಲಿ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಅಂದಾಜು 40 ಕೋಟಿ ರೂ.ಗಳು ವೆಚ್ಚವಾಗುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರವು 10 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಅದನ್ನುಹೊರತು ಪಡಿಸಿದಂತೆ ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಕಾರ್ಖಾನೆಗಳು, ಉದ್ದಿಮೆಗಳು ಹಾಗೂ ಹಲವಾರು ಸಂಸ್ಥೆಗಳು ಸಿಎಸ್ಆರ್ ನಿಧಿಯಿಂದ ತಮ್ಮ ವ್ಯಾಪ್ತಿಯಲ್ಲಿ ನೀಡಬಹುದಾದ ಮೊತ್ತವನ್ನು ನೀಡುವಂತೆ ಕೋರಿದರು.
ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೋರಿಯು ಜಿಲ್ಲೆಗೆ ಗೌರವ ತರುವ ಕಾರ್ಯವಾಗಿದೆ. ಅದರ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು. ಈ ಕಾರ್ಯಕ್ರಮಕ್ಕೆ ಉದಾರ ಮನಸ್ಸಿನಿಂದ ದೇಣಿಗೆ ನೀಡುವುದರ ಜೊತೆಗೆ ತಮ್ಮ ಸಂಸ್ಥೆಯವರು, ಕಂಪನಿಯವರು ಕೂಡ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಟ್ರಸ್ಟಿ ಡಾ. ವಿವೇಕ್ ಆಳ್ವಾ ಮಾತನಾಡಿ, ಸರ್ಕಾರದಿಂದ 10 ಕೋಟಿ ರೂ. ಹಾಗೂ ವಿದ್ಯಾರ್ಥಿಗಳ ನೋಂದಣಿಯಿಂದ 6 ಕೋಟಿ ರೂ. ಹಣ ಸಂಗ್ರಹವಾಗಿದ್ದು, ಉಟೋಪಚಾರಕ್ಕೆ ಅಂದಾಜು 11 ಕೋಟಿ ರೂ.ಗಳು ಖರ್ಚಾಗುವ ಸಾಧ್ಯತೆಯಿದೆ. ಜಿಲ್ಲೆಯ ಎಲ್ಲಾ ಕಂಪನಿಗಳು, ಕೈಗಾರಿಕೆಗಳು, ಉದ್ಯಮಿಗಳು ಹಾಗೂ ವಿವಿಧ ಸಂಸ್ಥೆಗಳು ಉದಾರ ಮನಸ್ಸಿನಿಂದ ನೆರವು ನೀಡುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾತನಾಡಿ, ಅಂತಾರಾಷ್ಟ್ರೀಯ ಜಾಂಬೂರಿಗೆ ಸಿದ್ಧತೆಗಳು ಬರದಿಂದ ಸಾಗುತ್ತಿವೆ. ಆಹಾರ ಮೇಳ, ಪುಸ್ತಕ ಮೇಳ, ಕೃಷಿ ಮೇಳ ಸೇರಿದಂತೆ ವಿವಿಧ ಮೇಳಗಳ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. 50,000 ಮಕ್ಕಳು ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗವಹಿಸಲಿದ್ದು ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ. ಪ್ರತಿದಿನ ಅವರೊಂದಿಗೆ 50 ಸಾವಿರ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆಯಿದ್ದು, ಒಂದು ಲಕ್ಷ ಜನಕ್ಕೆ ಅಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಶ್ಯು ಕುಮಾರ್ ವೇದಿಕೆಯಲ್ಲಿದ್ದರು.