ಕಾರ್ಕಳ, ಡಿ 19 (DaijiworldNews/DB): ಪುರಸಭೆ ವ್ಯಾಪ್ತಿಯ ಅನಂತಶಯನ ವೃತ್ತದ ಸಮೀಪದಲ್ಲಿ ಪುರಾತತ್ವ ಇಲಾಖೆಯ ನಿಷೇಧಿತ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಲು ಪುರಸಭೆಯಿಂದ ನೋಟೀಸ್ ಜಾರಿಯಾದರೂ, ಕಟ್ಟಡ ಕಾಮಗಾರಿ ಮುಂದುವರಿಸುತ್ತಿರುವ ವಿರುದ್ದ ಪುರಸಭೆ ಸದಸ್ಯ ಸೋಮನಾಥ ನಾಯ್ಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆ ಹಾಗೂ ಪುರಾತತ್ವ ಇಲಾಖೆಯ ಅನುಮತಿ ಪಡೆಯದೇ ನಿಷೇಧಿತ ವಲಯದಲ್ಲಿ ಅಕ್ರಮವಾಗಿ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವ ವಿಚಾರ ಗಮಕ್ಕೆ ಬಂದರೂ, ಅಧಿಕಾರಿಗಳು ಸುಮ್ಮನಿದ್ದಾರೆ. ಈಗ ಸಾರ್ವಜನಿಕರ ವಿರೋಧಕ್ಕೆ ಮಣಿದು ನೋಟೀಸ್ ಜಾರಿಗೊಳಿಸಲಾಗಿದೆ. ಆದರೆ ಕಾಮಗಾರಿ ಸ್ಥಗಿತಗೊಳಿಸುವ ಧೈರ್ಯ ತೋರದೇ ಪುರಸಭೆ ಆಡಳಿತ ಅಕ್ರಮಕ್ಕೆ ಕೈಜೋಡಿಸಿದೆ ಎಂದು ಆರೋಪಿಸಿದರು.
ಬಡವರಿಗೊಂದು ಮತ್ತು ಶ್ರೀಮಂತರಿಗೊಂದು ನ್ಯಾಯ ಎನ್ನುವುದಾದರೆ ಕಾನೂನು ಇರುವುದು ಯಾರಿಗೆ? ಇದು ಸರ್ವಾಧಿಕಾರವೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೂಪಾ ಜಿ. ಶೆಟ್ಟಿ, ಈಗಾಗಲೇ ಸಂಬಂಧಿಸಿದ ಕಟ್ಟಡ ಮಾಲಿಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಆದರೆ ಕಾಲಾವಕಾಶ ಕೇಳಿದ್ದು, ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಿಸಿದ ಕಾರಣಕ್ಕಾಗಿ ಕಾನೂನು ತೊಡಕಿನಿಂದ ಏಕಾಏಕಿ ಕಟ್ಟಡ ತೆರವು ಪ್ರಕ್ರಿಯೆ ಸಾಧ್ಯವಾಗಿಲ್ಲ ಎಂದರು.
ಮುಖ್ಯಾಧಿಕಾರಿಗಳ ಸಮಾಜಾಯಿಷಿ ಉತ್ತರಕ್ಕೆ ಆಕ್ರೋಶಿತರಾದ ಸದಸ್ಯ ಸೋಮನಾಥ ನಾಯ್ಕ್, ಪುರಸಭೆಯ ಆದೇಶಕ್ಕೂ ಬೆಲೆಯಿಲ್ಲ ಎಂದಾದರೆ ಜನಪ್ರತಿನಿಧಿಗಳಿಗೂ ಬೆಲೆಯಿಲ್ಲ. ಹಾಗಾಗಿ ನಾನು ಸಭೆಯಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ಸಭಾತ್ಯಾಗ ಮಾಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಎಣ್ಣೆಹೊಳೆ ಏತನೀರಾವರಿ ಪೈಪ್ಲೈನ್ ಕಾಮಗಾರಿಗೆ ರಸ್ತೆ ಅಗೆದು ಹಾಕಲಾಗಿದೆ. ಇದರಿಂದ ರಸ್ತೆ ಗುಂಡಿಗೆ ವಾಹನ ಸವಾರರು ಬಿದ್ದು ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟವರು ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಸದಸ್ಯೆ ಪ್ರತಿಮಾ ರಾಣೆ, ಶಶಿಕಲಾ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷೆ ಸುಮಾ ಕೇಶವ ಉತ್ತರಿಸಿ, ಈಗಾಗಲೇ ನಗರದ ರಸ್ತೆಗಳ ದುರಸ್ತಿಗೆ ಸಚಿವರು ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ನಗರದಲ್ಲಿ ಅಳವಡಿಸಲಾಗಿದ್ದ ಅಂಬೇಡ್ಕರ್ ಬ್ಯಾನರ್ಗಳನ್ನು ತೆರವುಗೊಳಿಸಿರುವುದರ ವಿರುದ್ಧ ಪ್ರತಿಮಾ ರಾಣೆ ಆಕ್ರೋಶ ಹೊರಹಾಕಿ, ನಿಮಗೆ ದಲಿತರು ಎಂದರೆ ಕೀಳರಿಮೆ, ಅಂಬೇಡ್ಕರ್ ಬ್ಯಾನರ್ ತೆರವುಗೊಳಿಸಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉತ್ತರಿಸಿ, ನಾವು ಅನಧಿಕೃತ ಬ್ಯಾನರ್ಗಳನ್ನು ಮಾತ್ರ ತೆರವುಗೊಳಿಸಿದ್ದು, ಅಂಬೇಡ್ಕರ್ ಬ್ಯಾನರ್ಗಳನ್ನು ತೆರವುಗೊಳಿಸಿಲ್ಲ ಎಂದಾಗ, ಅನಧಿಕೃತ ಬ್ಯಾನರ್ಗಳ ಪಟ್ಟಿ ಕೊಡಿ, ನಾವು ಅನುಮತಿ ಪಡೆದು ಹಾಕಿರುವ ಬ್ಯಾನರ್ ತೆರವು ಮಾಡಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಸದಸ್ಯೆ ಪ್ರತಿಮಾ ಆಕ್ರೋಶ ವ್ಯಕ್ತಪಡಿಸಿದರು.
ನಾಮಫಲಕ ಅಳವಡಿಸಿ
ವಾರ್ಡ್ಗಳ ರಸ್ತೆಯ ನಾಮಫಲಕಗಳು ಕೆಟ್ಟು ಹೋಗಿದ್ದು, ಅಳವಡಿಸಿಕೊಡುವಂತೆ ಪ್ರತಿಮಾ ರಾಣೆ ಆಗ್ರಹಿಸಿರು. ಇದಕ್ಕೆ ನೀತಾ ಆಚಾರ್ಯ ಮತ್ತು ಶಶಿಕಲಾ ಶೆಟ್ಟಿ ಬೆಂಬಲ ಸೂಚಿಸಿದರು. ಸದಸ್ಯ ಸಂತೋಷ್ ರಾವ್ ಮಾತನಾಡಿ, ಗುಣಮಟ್ಟದ ಫಲಕಗಳನ್ನು ಅಳವಡಿಸಿಕೊಡುವಂತೆ ವಿನಂತಿಸಿದರು. ಯೋಗೀಶ್ ದೇವಾಡಿಗ ಮಾತನಾಡಿ, ರಸ್ತೆ ಕಾಮಗಾರಿ ನಿರ್ಮಾಣ ಹಂತದಲ್ಲಿರುವಾಗ ಸಂಬಂಧಿಸಿದ ಗುತ್ತಿಗೆದಾರರಲ್ಲಿ ಅಳವಡಿಸಿಕೊಡಲು ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.
ಪುರಸಭೆ ಅಧ್ಯಕ್ಷೆ ಸುಮ ಕೇಶವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಜಿ.ಶೆಟ್ಟಿ ಉಪಸ್ಥಿತರಿದ್ದರು.