ಕುಂದಾಪುರ, ಡಿ 19 (DaijiworldNews/HR): ಪಂಚಾಯತ್ ಸದಸ್ಯರಿಗೆ ಗೌರವಧನ ಹೆಚ್ಚಳದ ಕುರಿತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕುಂದಾಪುರದಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಾವು ಜನಪ್ರತಿನಿಧಿಗಳ ಪ್ರತಿನಿಧಿ. ಹಾಗಾಗಿ ಪಂಚಾಯತ್ ಸದಸ್ಯರ ಜೀವನ ನಿರ್ವಣೆಯಲ್ಲಿನ ಸಮಸ್ಯೆಗಳ ಅರಿವಿದೆ. ರಾಜ್ಯದಲ್ಲಿ 50% ಮಹಿಳೆಯರು ಪಂಚಾಯತ್ ಸದಸ್ಯರಾಗಿದ್ದಾರೆ. ಮೀಸಲಾತಿಯ ಮೂಲಕ ಆಯ್ಕೆಯಾದ ಜನಪ್ರತಿನಿಧಿಗಳು ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರ ಕುಟುಂಬ ನಿರ್ವಹಣೆಗಾಗಿ ಮಾಸಿಕ 10 ಸಾವಿರ ರೂಪಾಯಿ ಗೌರವಧನ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಸರ್ಕಾರ ಮುಜುಗರದಿಂದ ತಪ್ಪಿಕೊಳ್ಳಲು ಗೌರವಧನ ಹೆಚ್ಚಳ ಮಾಡಿದೆ. ಇದು ತೀರಾ ಕಡಿಮೆಯಾಗಿದೆ. ಕೊನೇ ಪಕ್ಷ 5 ಸಾವಿರವಾದರೂ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ಇನ್ನು ನಮ್ಮ ಹೋರಾಟ ನಿಲ್ಲುವುದಿಲ್ಲ. ವಿಧಾನ ಮಂಡಲದ ಅಧಿವೇಶನದಲ್ಲಿ 3/30 ಅಡಿಯಲ್ಲಿ ಇದನ್ನು ಕೇಳುತ್ತೇವೆ ಎಂದು ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.