ಉಡುಪಿ, ಡಿ 19 (DaijiworldNews/HR): ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ 100 ಕೋಟಿಗೂ ಮಿಕ್ಕಿ ವಂಚನೆ ಆರೋಪ ಬಂದಿದ್ದು, ಸಹಕಾರಿ ಬ್ಯಾಂಕ್ ಕಚೇರಿಗೆ ಸಂತ್ರಸ್ತರು ಮುತ್ತಿಗೆ ಹಾಕಿದ್ದಾರೆ.
ಸಂತ್ರಸ್ತರು ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಗೆ ಭೇಟಿ ನೀಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಸಹಕಾರ ಬ್ಯಾಂಕ್ ಮುಖ್ಯಸ್ಥ ಬಿ ವಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದಾರೆ.
ಇನ್ನು ವಿವಿಧ ಸೊಸೈಟಿ ಮತ್ತು ಗ್ರಾಹಕರಿಂದ 100 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ವಂಚಿಸಿದ್ದು, ಠೇವಣಿ ಹಣವನ್ನು ಹಲವು ಕಡೆ ಹೂಡಿಕೆ ಮಾಡಿ ಸೊಸೈಟಿ ನಷ್ಟದಲ್ಲಿದೆ ಎನ್ನಲಾಗಿದೆ.
ಕಳೆದ ಒಂದು ತಿಂಗಳಿಂದ ಸಂತ್ರಸ್ತರು ಪರದಾಡುತ್ತಿದ್ದು, ಜೂನ್ ತಿಂಗಳಿಂದ ಗ್ರಾಹಕರಿಗೆ ಸೊಸೈಟಿ ಯಾವುದೇ ಬಡ್ಡಿ ನೀಡದಿದ್ದು, ಉಡುಪಿಯ ಕೆಲ ಮಠಗಳು ಕೂಡ ಠೇವಣಿ ಇಟ್ಟಿರುವ ಬಗ್ಗೆ ವದಂತಿ ಹಬ್ಬಿದೆ.
ಇನ್ನು ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.