Karavali
ಕಾಸರಗೋಡು: ಡಿ. 24ರಿಂದ ಜ. 2ರವರೆಗೆ ಬೇಕಲದಲ್ಲಿ ಅಂತಾರಾಷ್ಟ್ರೀಯ ಬೀಚ್ ಉತ್ಸವ
- Mon, Dec 19 2022 10:22:27 AM
-
ಕಾಸರಗೋಡು, ಡಿ 19 (DaijiworldNews/HR): ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಾಸರಗೋಡಿನ ಬೇಕಲ ಬೀಚ್ ಪಾರ್ಕ್ನಲ್ಲಿ ಡಿ. 24ರಿಂದ ಜ. 2ರ ವರೆಗೆ ಅಂತಾರಾಷ್ಟ್ರೀಯ ಬೀಚ್ ಉತ್ಸವ ಆಯೋಜಿಸಲಾಗಿದೆ ಎಂದು ಉದುಮ ಶಾಸಕ ಸಿ.ಎಚ್. ಕುಂಞಂಬು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ದಶದಿನಗಳ ಮಹಾಮೇಳವನ್ನು 24ರಂದು ಬೆಳಿಗ್ಗೆ 10 ಗಂಟೆಗೆ ಜರಗಲಿರುವ ವರ್ಣರಂಜಿತ ಸಮಾರಂಭದಲ್ಲಿ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಘಾಟಿಸಲಿರುವರು. ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಸಿ ಎಚ್ ಕುಂಞಂಬು ಅವರ ಅಧ್ಯಕ್ಷತೆಯಲ್ಲಿ ಮೇಳದ ಅತ್ಯಂತ ಆಕರ್ಷಣೆ ಎನಿಸಿರುವ ರೋಬೋಟಿಕ್ ಪ್ರದರ್ಶನವನ್ನು ಇಲಾಖಾ ಸಚಿವ ಅಹಮ್ಮದ್ ದೇವರ್ ಕೋಎಲ್ ಉದ್ಘಾಟಿಸಲಿದ್ದಾರೆ. ಸಂಸತ್ ಸದಸ್ಯ ರಾಜಮೋಹನ ಉಷ್ಣತ್ತಾನ 'ಪ್ಲವರ್ ವೆಸ್ಟ್ ' ಉದ್ಘಾಟನೆ ನಿರ್ವಹಿಸಲಿರುವರು. ಶಾಸಕರಾದ ಇ ಚಂದ್ರಶೇಖರನ್, ಏನ್ ಎ ನಲ್ಲಿಕುನ್ನು, ಎಂ ರಾಜಗೋಪಾಲನ್, ಪಿ ಕೆ ಎಂ ಅಶ್ರಫ್, ಜಿ ಪಂ ಅಧ್ಯಕ್ಷೆ ಬೇಬಿ, ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್, ಚಂದ್, ರಾಜ್ಯ ಪ್ರವಾಸಿ ಇಲಾಖೆ ನಿರ್ದೇಶಕ ಪಿ ಬಿ ನೂಹ್, ಜಿಲ್ಲಾ ಪೊಲೀಸಧಿಕಾರಿ ವೈಭವ್ ಸಕ್ಕೇನಾ ಮುಖ್ಯ ಅತಿಥಿಗಳಾಗಿರುವರು. ಮಾಜಿ ಸಂಸತ್ಸದಸ್ಯ ಪಿ ಕರುಣಾಕರನ್, ಮಾಜಿ ಶಾಸಕರಾದ ಕೆ ಕುಂಞರಾಮನ್, ಕೆ ವಿ ಕುಂಞರಾಮನ್, ಕೆ ಪಿ ಕುಂಞ ಕಣ್ಣನ್, ಜಿಲ್ಲಾ ಪಂಚಾಯತು ಉಪಾಧ್ಯಕ್ಷ ಪಾದೂರು ಶಾನವಾಸ್, ಬ್ಲಾಕ್ ಪಂಚಾಯತು ಅಧ್ಯಕ್ಷರಾದ ಕೆ ಮಣಿಕಂಠನ್, ಸಿ ಜೆ ಮ್ಯಾಗ್ಯೂ, ಸಿ ಎ ಸೈಮಾ, ಕಾಞಂಗಾಡ್ ನಗರಸಭಾ ಅಧ್ಯಕ್ಷ ಕೆ.ವಿ ಸುಜಾತಾ, ಗ್ರಾಮ ಪಂಚಾಯತು ಅಧ್ಯಕ್ಷರಾದ ಎಂ.ಕುಮಾರನ್, ಪಿ ಲಕ್ಷ್ಮಿ, ಸುರಜಾ ಅಬೂಬಕ್ಕರ್ , ಟಿ ಶೋಭಾ, ವಿವಿಧ ರಾಜಕೀಯ ಪಕ್ಷ ಮುಖಂಡರಾದ ಎಂ.ವಿ. ಬಾಲಕೃಷ್ಣನ್ ಮಾಸ್ತರ್, ಪಿ ಕ ಫೈಸಲ್, ಸಿ ಪಿ ಬಾಬು, ಟಿ, ಇ, ಅಬ್ದುಲ್ಲ, ರವೀಶ ತಂತ್ರಿ, ಅಝೀಝ್, ಕಡಪುರ ಮೊದಲಾದವರು ಭಾಗವಹಿಸಲಿರುವರು. ಬಿ ಆರ್ ಡಿ ಸಿ ಆಡಳಿತ ನಿರ್ದೇಶಕ ಪಿ ಶಿಜಿನ್ ಸ್ವಾಗತಿಸಿ, ಬಿ ಆರ್ ಡಿ.ಸಿ. ಮ್ಯಾನೇಜರ್ ಯು.ಎನ್ ಪ್ರಸಾದ್ ಧನ್ಯವಾದ ಸಲ್ಲಿಸಲಿದ್ದಾರೆ ಎಂದರು.
ಇನ್ನು ಮುಂದೆ ವಿವಿಧ ದಿನಗಳಲ್ಲಿ ಕೇರಳ ವಿಧಾನಸಭಾ ಸಭಾಪತಿ ಶಂಶೀರ್, ಸಚಿವರಾದ, ಪಿ ಎ ಮುಹಮ್ಮದ್ ರಿಯಾಝ್' (ಲೋಕೋಪಯೋಗಿ, ಪ್ರವಾಸಿ ಖಾತೆ), ಪಿ. ಪ್ರಸಾದ್ (ಕೃಷಿ), ಡಾ. ಆರ್ ಬಿಂದು (ಉನ್ನತ ಶಿಕ್ಷಣ), ವಿ. ಎನ್. ವಾಸನ್ (ಸಾಂಸ್ಕೃತಿಕ, ಸಹಕಾರಿ ), ವಿಪಕ್ಷ ನಾಯಕ ಪಿ ಡಿ ಸತೀಶನ್, ಮುಸ್ಲಿಂ ಲೀಗ್ ಮುಖಂಡ ಪಿ. ಕ ಕುಂಞಲಿ ಕುಟ್ಟಿ, ರಾಜ್ಯಸಭಾ ಸದಸ್ಯ ವಿ ಶಿವದಾಸನ್, ಕ್ಯೂಬನ್ ರಾಯಭಾರಿ ಅಲೆಜಾಂಡೋ ಸಿಮಾನ್ ಕಸ್ ಮರಿನ್ ಕೇರಳ ಸಂಗೀತ ನಾಟಕ ಅಕಾಡಮಿ ಕಾರ್ಯದರ್ಶಿ ಕರಿವಳ್ಳೂರ್ ಮುರಳಿ, ಗ್ರಂಥಲೋಕ ಸಂಪಾದಕ ಪಿ ವಿ ಕ ವನಯಾಲ್, ಸಫಾರಿ ಟಿ ವಿ ಮುಖ್ಯಸ್ಥರೂ ಸಂಚಾರ ಸಾಹಿತಿಯೂ ಆಗಿರುವ ಸಂತೋಷ್ ಜಾರ್ಜ್ ಕುಳಂಗರೆ, ಕೇರಳ, ಜಾನಪದ ಅಕಾಡಮಿ ಅಧ್ಯಕ್ಷ ಸಿ.ಜೆ ಕುಟ್ಟಪ್ಪನ್, ಬೇಕಲ್ ಉತ್ಸವದ ಲಾಂಛನ ಸಿದ್ಧಪಡಿಸಿದ ಹಿರಿಯ ಚಿತ್ರ ಕಲಾವಿದ ಬಾರ ಭಾಸ್ಕರನ್, ಖ್ಯಾತ ಚಿತ್ರ ನಿರ್ದೇಶಕ ಫಾರೂಕ್ ಅಬ್ದುಲ್ ರಹಿಮಾನ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಜಿಲ್ಲೆಯ ಪ್ರಮುಖ ನದಿಗಳಾದ ಚಂದ್ರಗಿರಿ, ತೇಜಸ್ವಿನಿ, ವಯಸ್ವಿನಿ' ಎಂಬಿವುಗಳ ಹೆಸರಿಸಿರುವ ಮೂರು ವೇದಿಕೆಗಳಲ್ಲಿ ಕಲಾ - ಸಾಂಸ್ಕೃತಿಕ ಕಾರ್ಯಕ್ರಮಗಳು 10 ದಿನಗಳ ಕಾಲ ಮೇಸಲಿವೆ. ಪ್ರತೀದಿನ ಬೆಳಗ್ಗೆ 11 ಗಂಟೆಯಿಂದ ತಡರಾತ್ರಿ ವರೆಗೆ ಉತ್ಸವ ನಗರಕ್ಕೆ ಪ್ರವೇಶ ಕಲ್ಪಿಸಲಾಗಿದ್ದು, ಪೂರ್ವಾಹ್ನ ಪ್ರವೇಶಿಸುವ ಮಂದಿ ತಡರಾತ್ರಿ ವರೆಗೂ ವೈವಿಧ್ಯ ಕಾರ್ಯಕ್ರಮಗಳನ್ನು ವೀಕ್ಷಿಸಿ ಮರಳಬಹುದು, ಹಿರಿಯರಿಗೆ 50 ರೂ ಹಾಗೂ ಪುಟಾಣಿಯರಿಗೆ 25 ರೂ ಟಿಕೇಟು ದರ ನಿಗದಿಪಡಿಸಲಾಗಿದೆ. ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುವವು, ಕುಟುಂಬಶ್ರೀ ಹಾಗೂ ಅಸ್ಮಿ ಹಾಲ್ ಡೇನ್ ಸಜ್ಜುಗೊಳಿಸುವ ವಾಣಿಜ್ಯ, ವ್ಯಾಪಾರ, ಆಹಾರ ಸ್ಪಾಟ್ ಗಳೂ, ಪುಷ್ಪ ಮೇಳವೂ ಮೆರುಗಾಗಲಿವೆ.
ಉತ್ಸವ ನಗರದ ಪ್ರಮುಖ ವೇದಿಕೆಯಾದ ಚಂದ್ರಗಿರಿಯಲ್ಲಿ ಪ್ರತೀದಿನ ರಾತ್ರಿ ಏಳು ಗಂಟೆಯಿಂದ ಕಣ್ಮನ ಸೆಳೆಯುವ ವಿಸ್ಮಯಕಾರಿ ಕಾರ್ಯಕ್ರಮಗಳು ನಡೆಯಲಿದ್ದು, ಡಿಸೆಂಬರ್ 24 ರಂದು ಕೇರಳಕ್ಕೆ ಪ್ರಥಮ ಬಾರಿ ಅಗಮಿಸುತ್ತಿರುವ ಪಂಜಾಬಿನ ಪ್ರಸಿದ್ಧ ಸೂಫಿ ಸಿನೆಮಾ ಗಾಯಕರಾದ ನೂರಸ್ಕರ್ಸ್ ತಂಡದ ಮೆಗಾ ಡ್ರೈವ್ ಮ್ಯೂಸಿಕ್ ಬ್ಯಾಂಡ್, 25 ರಂದು ರಾಜ್ ಕಲೇಶ್, ನಿರ್ಮಲ್ ಪಾಲಾಯಿ ಬಳಗದ ಮ್ಯಾಜಿಕ್ ಮತ್ತು ಹಾಸ್ಯ ಪ್ರದರ್ಶನ, 26 ರಂದು ಸಿತಾರಾ ಕೃಷ್ಣ ಕುಮಾರ್ ನೇತೃತ್ವ ನೀಡುವ ಮಬಾರಿಕಸ್ ನ ಸಂಗೀತ ಸುಧೆ, 27 ರಂದು ಶಬ್ಬಂ ರಿಯಾಜ್ ಹಾಗೂ ತಂಡದ ಸೂಫಿ ಸಂಗೀತ, 28 ರಂದು ಪ್ರಸೀದ ಚಾಲಕ್ಕೋತಿ ನೇತೃತ್ವದ ಜಾನಪದ ಹಾಡು - ನೃತ್ಯ ಮೇಳ, 29 ರಂದು ಮಟ್ಟನ್ನೂ ಶಂಕರನ್ ಹುಟ್ಟಿ ಮಾರಾರ್ ನೇತೃತ್ವದ ಕಾಯಂಬಕ ಅರುಣ್ ಅಲಾಟೆ ಹಾಗೂ ಅಂಜು ಜೋಸೆಫ್ ನೇತೃತ್ವದ ಮ್ಯೂಸಿಕ್ ಬ್ಯಾಂಡ್, 30 ರಂದು ಖ್ಯಾತ ಮಾಪಿಳ್ಳ ಹಾಡುಗಾರ್ತಿ ರಹನಾ ಹಾಗೂ ತಂಡದ ಗಾನಮೇಳ, ಒಪ್ಪನ, ಜತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ಸುರಭಿ, ಲಕ್ಷ್ಮಿ ಹಾಗೂ ವಿನೋದ್, ಕೀವೂರ್ ಅವರ ಹಾಸ್ಯ ಪ್ರದರ್ಶನ, 31 ರಂದು ವಿಧು ಪ್ರತಾಪ್ ಹಾಗೂ ತಂಡದ ಸಂಗೀತ ಸುಧೆಯಲ್ಲಿ ಜತೆಗೆ ಅಕ್ರೋ ಬಾಟಿಕ್ ಪ್ರದರ್ಶನ, ಫಯರ್ ಡಾನ್ಸ್, ಹೊಸವರ್ಷಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮ ಬೇಕಲ ಕಿನಾರೆಯಲ್ಲಿ ಸಿಡಿಮದ್ದು ಪ್ರದರ್ಶನ ಇರುವುದು, 2022 ಜನವರಿ 01 ರಂದು ಮೊಹಮ್ಮದ್ ಅಸ್ಲಂ ಅವರ ಮೊಹಮ್ಮದ್ ರಾಫಿ ಸಂಗೀತ ನಿಶ, 02 ರಂದು ಕೀ ಬೋರ್ಡ್ ಮಾಂತ್ರಿಕ ಸ್ಟೀಫನ್ ದೇವಸಿ ಅವರ ಮ್ಯೂಸಿಕ್ ಬ್ಯಾಂಡ್ ವಿಶೇಷ ಪ್ರದರ್ಶನ ಗಮನ ಸೆಳೆಯಲಿವೆ.
2ನೇ ವೇದಿಕೆಯಾದ ತೇಜಸ್ವಿನಿಯಲ್ಲಿ ಜಿಲ್ಲೆಯ ಕುಟುಂಬಶ್ರೀ ಕಾರ್ಯಕರ್ತೆಯರ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಮೂರನೇ ವೇದಿಕೆಯಾದ ಪಯಸ್ವಿನಿಯಲ್ಲಿ ಸ್ವಾಗತ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಕಲಾ ಕ್ರೀಡಾ ಕೇಂದ್ರಗಳು, ಕ್ಲಬ್ ಗಳು ಮಹಿಳಾ ವೇದಿಕೆಗಳ ನೇತೃತ್ವದಲ್ಲಿ ಶಿಂಗಾರಿಮೇಳ, ಗಾನಮೇಳ, ಕಥಕ್ಕಳಿ, ಸ್ಟೇಜ್ ಶೋ, ಸಾಮಾಜಿಕ ನಾಟಕ, ಜಾನಪದ ನೃತ್ಯ, ಮಿಮಿಕ್ರಿ ಏಕಪಾತ್ರಾಭಿನಯ, ಕೇರಳ ನಟನಂ, ದಫ್, ಅರಬನ ಮುಟ್ಸ್ ಕಳರಿಪ್ಪಯುಟ್ಟ ಮೊದಲಾದ ವೈವಿಧ್ಯ ಪೂರ್ಣ ಕಾರ್ಯಕ್ರಮಗಳು, ಕೇರಳ ಪೊಲೀಸು ಸೇನೆಯ ಕಾಸರಗೋಡು ತಂಡದ ನಾಟಕ : ಕಾಞಂಗಾಡ್ ಆರ್ಟ್ ಫಾರಂ ನ ಗಾನ ಮೇಳ ಇತ್ಯಾದಿಗಳು ನಡೆಯಲಿದೆ.
ಇತಿಹಾಸ ಪ್ರಸಿದ್ಧವಾದ ಬೇಕಲ ಕೋಟೆ ಕೇಂದ್ರೀಕರಿಸಿ, ಕಾಸರಗೋಡು ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರವಾಸಿ ಅಭಿವೃದ್ಧಿ ಯೋಜನೆಗಳಿಗೆ ಪ್ರೋತ್ಸಾಹ ಹಾಗೂ ಪ್ರದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಪೂರ್ಣ ಜನ ಸಹಭಾಗಿತ್ವದೊಂದಿಗೆ ನಡೆಸಲಾಗುವ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ಕೇರಳ ಸರಕಾರದ ಆರ್ಥಿಕ ನೆರವು, ಬೇಕಲ ಪ್ರವಾಸಿ ಅಭಿವೃದ್ಧಿ ನಿಗಮ, ಜಿಲ್ಲಾ ಪ್ರವಾಸಿ ಅಭಿವೃದ್ಧಿ ನಿಗಮ (8 23 3 2 ), ಸ್ಥಳೀಯಾಡಳಿತ ಇಲಾಖೆ, ಕುಟುಂಬಶ್ರೀ ಮಿಶನ್ ಎಂಬಿವುಗಳ ಸಹಾಯ ಸಹಕಾರಗಳು ಲಭ್ಯವಾಗಿವೆ. ಉದುಮ ಶಾಸಕರೂ, ಮೇಳದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ನ್ಯಾಯವಾದಿ ಸಿ ಎಚ್ ಕುಂಞಂಬು ಅವರು ವಿಧಾನ ಸಭೆಯಲ್ಲಿ ಮಂಡಿಸಿದ ಸಬ್ ಮಿಶನ್ ಹಿನ್ನಲೆಯಲ್ಲಿ ಬೇಕಲ ಬೀಚ್ ಮಹಾಮೇಳಕ್ಕೆ ರಾಜ್ಯ ಸರಕಾರದ ಸರ್ವ ರೀತಿಯ ಸಹಕಾರವನ್ನು ಪ್ರವಾಸಿ ಖಾತೆ ಸಚಿವ ಪಿ ಎ ಮೊಹಮ್ಮದ್ ರಿಯಾಝ್ ಘೋಷಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ಕುಟುಂಬಶ್ರೀ ಸಹಿತ ಸರಕಾರಿ ಸಂಸ್ಥೆಗಳು, ಜಿಲ್ಲೆಯ ರಾಜಕೀಯ ನಾಯಕತ್ವ ಯುವಜನ ಸಂಘಟನೆಗಳು ಸಕ್ರೀಯ ಕಾರ್ಯಾಚರಣೆಯಲ್ಲಿವೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ ಎಚ್ ಕುಂಞಂಬು, ಆಡಳಿತ ನಿರ್ದೇಶಕ ಪಿ ಕಿಜಿನ್, ಜಿಲ್ಲಾಧಿಕಾರಿ ಭಂಡರಿ ಸ್ವಾಗತ್, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ರಾಮೇಂದ್ರನ್ ಎ ಕೆ, ಮಾಜಿ ಶಾಸಕ ಕೆ ವಿ ಕುಂಞರಾಮನ್, ಹಕೀಂ ಕುನ್ನಿಲ್, ಕೆ ಇ ಎ ಬಕ್ಕರ್, ಎಂ ಎ ಲತೀಫ್, ಬಿಆರ್ಡಿಸಿ ಮೆನೇಜರ್ ಯು ಎಸ್. ಪ್ರಸಾದ್ ಭಾಗವಹಿಸಿದ್ದರು.