ಕಾರ್ಕಳ, ಡಿ 17 (DaijiworldNews/HR): ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬನಿಗೆ ಕಾರ್ಕಳ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಶಿಕ್ಷೆ ನೀಡಿದೆ.
ಮಿಯ್ಯಾರು ರಾಮೇರುಗುತ್ತು ನಿವಾಸಿ ಉಮಾನಾಥ ಪ್ರಭು(47) ಶಿಕ್ಷೆಗೊಳಗಾದವನು.
2015 ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಸ್ಟ್ಯಾನಿ ಸಲ್ಡಾನಾ ಎಂಬವರ ಮನೆಯ ಹಿಂಬಾಗಿಲನ ಬೀಗ ಮುರಿದು ಮನೆಯೊಳಗೆ ಅಕ್ರಮ ಪ್ರವೇಶಗೈದು ಕವಾಟಿನಲ್ಲಿ ಇಡಲಾಗಿದ್ದ ಬೆಲೆಬಾಳುವ ಚಿನ್ನದ ಉಂಗರುಗಳನ್ನು ಹಾಗೂ ರೂ. 9,000 ಕಳವುಗೈದಿರುವ ಘಟನೆ ನಡೆದಿತ್ತು.
ಅಂದಿನ ನಗರ ಠಾಣಾಧಿಕಾರಿ ಕೃಷ್ಣಮೂರ್ತಿ ಪ್ರಕರಣದ ತನಿಖೆ ನಡೆಸಿದ್ದರು. ಎಸೈ ರಫೀಕ್ ಆರೋಪಿಯವರು ಪ್ರಕರಣದ ಆರೋಪಿ ಉಮಾನಾಥ ಪ್ರಭುನನ್ನು ಬಂಧಿಸಿ ಕಳವುಗೈದಿದ್ದ ಚಿನ್ನಾಭರಣ ಹಾಗೂ ನಗರದನ್ನು ಸ್ವಾಧೀನ ಪಡಿಸಿದ್ದರು. ಪೊಲೀಸ್ ವೃತ್ತನಿರೀಕ್ಷಕ ಜಾಯ್ ಆಂತೋನಿ ತನಿಖೆ ನಡೆಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯ ವಿಚಾರಣೆ ನಡೆಸಿದ ಕಾರ್ಕಳ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಚೇತನಾ ಎಸ್.ಎಫ್ ಅವರು ವಾದ ಪ್ರತಿವಾದವನ್ನು ಆಲಿಸಿ ಕಲಂ 457 ಭಾರತೀಯ ದಂಡ ಸಂಹಿತೆಯ ಪ್ರಕಾರ 2 ವರ್ಷ ಕಠಿಣ ಕಾರಗೃಹದ ವಾಸ. ಹಾಗೂ ರೂ. 2,000 ದಂಡ. ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ. ಕಲಂ 380 ಭಾರತೀಯ ದಂಡ ಸಂಹಿತೆಯ ಪ್ರಕಾರ 2 ವರ್ಷ ಕಠಿಣ ಕಾರಗೃಹ ವಾಸದ ಶಿಕಷೆ ಹಾಗೂ ರೂ. 2000 ದಂಡ. ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಗೃಹ ವಾಸದ ಶಿಕ್ಷೆಯ ತೀರ್ಪು ನೀಡಿದ್ದಾರೆ.
ಕಲಂ 75 ಭಾರತೀಯ ದಂಡ ಸಂಹಿತೆಯಂತೆ ಅಪರಾಧಿ ಉಮಾನಾಥ ಪ್ರಭು ಹಳೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾನೆ.
ಸರ್ಕಾರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಶೋಭಾ ಎಮ್. ನಾಯಕ್ ವಾದಿಸಿದರು.