ಕಾರ್ಕಳ, ಡಿ 17 (DaijiworldNews/HR): ಸಾಣೂರು ಶುಂಠಿಗುಡ್ಡೆ ಎಂಬಲ್ಲಿ ಕೇರಳ ಮೂಲಕ ಕಾರ್ಮಿಕರೊಬ್ಬರು ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಗೈದ ಪ್ರಕರಣಕ್ಕೆ ಹೊಸ ತಿರುವು ಪಡೆದಿದೆ.
ಮಾನಸಿಕ ಹಿಂಸೆ ನೀಡಿ ಸಾವಿಗೆ ಕಾರಣವಾದ ಹಾಗೂ ದುಡಿಮೆಗೆ ಸಂಬಳ ನೀಡಲಿಲ್ಲ ಎಂಬ ಆರೋಪದಡಿಯಲ್ಲಿ ಪ್ರಕರಣಕ್ಕೆ ಇಬ್ಬರ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಕೇರಳದ ಮಲಪುರಂ ಎಡಕ್ಕಾರ್ ಮೋತೆಡಮ್ ಡನ್ನಕ್ಕರಕ್ಕಳ್ಳಿಯ ಟಿ.ಕೆ.ಗೋಪಿನಾಥನ್ ಬದುಕಿಗೆ ಅಂತ್ಯ ಬರೆದವರು.
ಅಕ್ಟೋಬರ್ 19ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಗೋಪಿನಾಥನ್ ಅವರ ಮೃತದೇಹವು ದುಡಿಯುತ್ತಿದ್ದ ತೋಟದ ಪರಿಸರದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೇ ಬಿಂಬಿಸಲಾಗಿತ್ತು.
ಇನ್ನು ಮೃತ ವ್ಯಕ್ತಿಯು ಸಾಣೂರು ಗ್ರಾಮದ ಶುಂಟಿಗುಡ್ಡೆಯಲ್ಲಿ ಆರ್ ವಿವೇಕಾನಂದ ಶೆಣೈ ಮತ್ತು ದಿಲೀಪ್ ಜಿ ಎಂಬವರ ರಬ್ಬರ್ ಪ್ಲಾಂಟೇಷನ್ನಲ್ಲಿ ಟ್ಯಾಪರ್ ಕೆಲಸಕ್ಕೆ ಮಾಡುತ್ತಿದ್ದರು ಅದೇ ಪ್ಲಾಂಟೇಶನ್ನ ಗುಡಿಸಲಿನಲ್ಲಿ ಒಂಟಿಯಾಗಿ ಬದುಕು ನಿರ್ವಹಿಸುತ್ತಿದ್ದರು.
ಪತಿ ಟಿ.ಕೆ ಗೋಪಿನಾಥನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸುಧಾ ಕೆ.ಎಸ್ ಕಾರ್ಕಳ ನಗರ ಠಾಣೆಗೆ ಹಲವು ದಿನಗಳ ಬಳಿಕ ದೂರು ನೀಡಿದ್ದು, ದೂರಿನ ವಿವರದಂತೆ ಆರ್ ವಿವೇಕಾನಂದ ಶೆಣೈ, ದಿಲೀಪ್ ಜಿ, ಮತ್ತು ಇತರರು ಸುಧಾ ಕೆ. ಎಸ್ ಇವರ ಗಂಡನಿಗೆ ಸರಿಯಾಗಿ ಸಂಬಳವನ್ನು ನೀಡದೇ ಹಾಗೂ ಅಗತ್ಯವಿದ್ದಾಗ ರಜೆಯನ್ನು ನೀಡದೇ ತೊಂದರೆ ನೀಡುತ್ತಿದ್ದರು. ಕೆಲಸವನ್ನು ಬಿಟ್ಟರೆ ಕೊಲೆ ಮಾಡುವುದಾಗಿ ಅಪಾದಿತರು ಬೆದರಿಕೆ ಹಾಕುತ್ತಿದ್ದರು. ಸುಧಾ ಕೆ. ಎಸ್ ರವರ ಗಂಡ ಫೋನ್ ಕರೆ ಮಾಡಿ ಮಾತನಾಡುತ್ತಿದ್ದಾಗ ತಾನು ಒಬ್ಬನೇ ಇಲ್ಲಿ ಇದ್ದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಅಪಾದಿತರ ಕಿರುಕುಳದಿಂದ ಕೆಲಸ ಬಿಟ್ಟುಹೋಗಿರುತ್ತಾರೆ. ಕೆಲವು ದಿನಗಳ ಹಿಂದೆ ಕೇರಳದಿಂದ ಕೆಲಸಕ್ಕೆಂದು ಬಂದವರೊಬ್ಬರು ಅಪಾದಿತರ ಕಿರುಕುಳದಿಂದ ತಾನು ಇಲ್ಲಿ ಇರುವುದಿಲ್ಲ ಒಂದೆರಡು ದಿನಗಳಲ್ಲಿ ಬಿಟ್ಟುಹೋಗುತ್ತೇನೆಂದು ಹೇಳುತ್ತಿದ್ದರು. ಇದರಿಂದ ಹೆದರಿದ ಸುಧಾ ಕೆ. ಎಸ್ ರವರ ಗಂಡ ವಾಯ್ಸ್ ಮೆಸೇಜ್ಗಳನ್ನು ಕಳುಹಿಸಿ 2-3 ಮೊಬೈಲ್ ನಂಬರ್ಗಳನ್ನು ಕಳುಹಿಸುತ್ತೇನೆ ಇವುಗಳನ್ನು ಮೊಬೈಲ್ನಲ್ಲಿ ಸೇವ್ ಮಾಡಿ ಇಟ್ಟುಕೊಂಡು ಸಂಜೆಯ ಸಮಯ ತಾನು ಫೋನ್ ಕರೆ ಸ್ವೀಕರಿಸದಿದ್ದರೆ ಈ ನಂಬರ್ಗಳನ್ನು ಪೋಲೀಸರಿಗೆ ತಿಳಿಸುವಂತೆ ಹೇಳಿದರೆಂದು ದೂರು ನೀಡುವಂತೆ ತಿ ದೂರಿನಲ್ಲಿ ಸುಧಾ ಉಲ್ಲೇಖಿಸಿದ್ದಾರೆ.
ಗಂಡನಿಗೆ ಪೆಟ್ರೋಲ್ ಸುರಿದುಕೊಂಡು ಕ್ರೂರ ರೀತಿಯಲ್ಲಿ ಆತ್ಮಹತ್ಯೆ ಮಾಡುವ ಯಾವುದೇ ಮನಸ್ಥಿತಿ ಇರಲಿಲ್ಲ ಎಂದು ವಿವರಿಸಿದ್ದಾರೆ.
ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.