ಮಂಗಳೂರು, ಡಿ 17 (DaijiworldNews/DB): ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದಷ್ಟೇ ಕಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತೇವೆ ಎಂದು ಎಲ್ಲಿ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನು ತಿರುಚಿ ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಭಯೋತ್ಪಾದನೆಯನ್ನು ಹತ್ತಿಕ್ಕಿದೆಯೇ? ದೇಶದಲ್ಲಿ ಬಿಜೆಪಿಯು ಜನರನ್ನು ಪ್ರಚೋದಿಸುವುದು, ಭಾವನಾತ್ಮಕ ವಿಚಾರ ಮಾತನಾಡುವುದಲ್ಲ. ಉಗ್ರಗಾಮಿ ಚಟುವಟಿಕೆ ಹತ್ತಿಕ್ಕುವುದಕ್ಕೆ ಮೊದಲು ಅವರು ಗಮನ ಹರಿಸಲಿ ಎಂದು ಸವಾಲೆಸೆದರು.
ನೈತಿಕ ಪೊಲೀಸ್ಗಿರಿ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಅದನ್ನು ಪ್ರೇರೇಪಿಸುವ ಕೆಲಸವನ್ನು ಸ್ವತಃ ಮುಖ್ಯಮಂತ್ರಿಯವರೇ ಮಾಡುತ್ತಿದ್ದಾರೆ. ಎರಡು ತಿಂಗಳಲ್ಲಿ ಸುಮಾರು ಏಳೆಂಟು ನೈತಿಕ ಪೊಲೀಸ್ಗಿರಿ ಪ್ರಕರಣ ಆಗಿರುವುದು ಖಂಡನೀಯ. ನೈತಿಕ ಪೊಲೀಸ್ಗಿರಿ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಖು. ಸಿಎಂಗೆ ಕಾನೂನು ಗೊತ್ತಿದೆಯೇ ಎಂದು ಪ್ರಶ್ನಿಸಿದರು.
ಪೊಲೀಸರು ಇರುವುದು ಕಾನೂನು ಸುವ್ಯವಸ್ಥೆ ಕಾಪಾಡಲು. ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡುವುದು ಖಂಡನೀಯ. ಇಂತಹವುಗಳಿಗೆ ಅವಕಾಶ ಕೊಡುವುದು ತಪ್ಪು. ಆಕ್ಷನ್ಗೆ ರಿಯಾಕ್ಷನ್ ಇದ್ದೇ ಇರುತ್ತದೆ ಎಂದರೆ ಏನರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.