ಕುಂದಾಪುರ, ಡಿ 17 ( DaijiworldNews/MS): ಆಯಾ ಕಾಲ ದೇಶಕ್ಕೆ ಹೊಂದಿಕೊಂಡು ನೀಡಲಾಗುವ ಸಂಸ್ಕಾರವೇ ಶಿಕ್ಷಣ. ಜಗತ್ತಿನ ಜನರ ಹೃದಯ ಮತ್ತು ಮನೋಭೂಮಿಕೆಯಲ್ಲಿ ಜ್ಞಾನದ ಕ್ರಾಂತಿಯನ್ನು ಸೃಷ್ಟಿಸುವುದೇ ನಿಜವಾದ ಶಿಕ್ಷಣ ಎಂದು ಉಡುಪಿಯ ಬಿಷಪ್ ರೆ. ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು. ಅವರು ಕುಂದಾಪುರದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಮತ್ತು ರಜತ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ನಿಂತ ನೀರಲ್ಲ. ಹುಟ್ಟಿನಿಂದ ಸಾವಿನ ವರೆಗೆ ಕಲಿಯುತ್ತಿರಬೇಕು. ನಮ್ಮ ಸ್ನೇಹಿತರಿಂದ ಸಮಾಜದಿಮದ ಶಿಕ್ಷಣ ಕಲೆಯುತ್ತೇವೆ. ಅಜ್ಙಾನ ತೊಡೆದುಹಾಕುವುದು ಕಷ್ಟದ ಕೆಲಸವಲ್ಲ. ಆದರೆ ಸ್ವಾರ್ಥ, ಕೀಳು ಮನಸ್ಸು, ದುರಹಂಕಾರವನ್ನು ಹೋಗಲಾಡಿಸಬೇಕಾದರೆ ವರ್ಷಗಳೇ ಬೇಕಾಗುತ್ತದೆ. ಆಕಾಶದಲ್ಲಿ ಹಕ್ಕಿ ಹಾರಬೇಕಾದರೆ ರೆಕ್ಕೆಗಳು ಹೇಗೇ ಮುಖ್ಯವೋ ಅದೇ ರೀತಿ ಮನುಷ್ಯನಿಗೆ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಬಹಳ ಮುಖ್ಯ ಎಂದರು. ಪುಸ್ತಕದ ಪಾಠ ಮರೆತ ಮೇಲೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದೇ ನಿಜವಾದ ಶಿಕ್ಷಣ ಎಂದ ಅವರು, 67 ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಬರುತ್ತಿದ್ದೇವೆ. ಸಾವಿರಾರು ವಿದ್ಯಾರ್ಥಿಗಳು ಕಲಿತು ಹೋಗಿದ್ದಾರೆ. ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಮತ್ತು ಗುಣಮಟ್ಟವನ್ನು ಹೆಚ್ಚಿಸುವುದೇ ನಮ್ಮ ಮುಖ್ಯ ಆದ್ಯತೆ ಎಂದರು.
ರಜತ ಮಹೋತ್ಸವದ ಸಂದರ್ಭ ಸಂಚಿಕೆಯನ್ನು ಉಡುಪಿ ಜಿಲ್ಲಾ ಸಿ.ಯು.ಎಸ್.ಇ ಕಾರ್ಯದರ್ಶಿ ವಿನ್ಸೆಂಟ್ ಕ್ರಾಸ್ತಾ ಬಿಡುಗಡೆಗೊಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಬ್ರಹ್ಮಾವರದ ಲಿಟ್ಲ್ ರಾಕ್ ಶಾಲೆಯ ಮ್ಯಾಥ್ಯೂ ಸಿ. ನಿನನ್, ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಮುಖ್ಯ ಅತಿಥಿಗಳಾಗಿದ್ದರು, ರೆ.ಫಾ.ಸ್ಟ್ಯಾನಿ ಬಿ ಲೋಬೋ, ರೆ.ಫಾ.ಅಶ್ವಿನ್ ಅರಾಹ್ನಾ, ರೆ. ಸಿ. ಮರಿಯಾ ಸಂಗೀತಾ ಎ.ಸಿ. ಉಪಸ್ಥಿತರಿದ್ದರು. ಶಾಲಾ ಮುಖ್ಯಸ್ಥ ರೆ.ಫಾ.ಸ್ಟ್ಯಾನೀ ತಾವ್ರೋ, ಸಿಸ್ಟರ್ ಥೆರೆಸಾ ಶಾಂತಿ ಎ.ಸಿ., ವಿದ್ಯಾರ್ಥಿ ನಾಯಕ ಕಲ್ಯಾಣ್ ಬಸವರಾಜ್, ಹಾಗೂ ಶಾಲಾ ಆಡಳಿತ ವರ್ಗ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ 2019, 20, 21 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ, ಕಳೆದ 25 ವರ್ಷಗಳಿಂದ ವಿದ್ಯಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ, ಶಿಕ್ಷಕಿಯರನ್ನು, ವೇದಿಕೆಯಲ್ಲಿ ಗಣ್ಯರನ್ನು ಅಭಿನಂದಿಸಲಾಯಿತು.
ವಂ.ಫಾ.ಸ್ಟ್ಯಾನಿ ತಾವ್ರೋ ಸ್ವಾಗತಿಸಿ, ಸಿ.ಸುನೀತಾ ಡಿ'ಸೋಜಾ ವಂದಿಸಿದರು.