ಮಂಗಳೂರು, ಡಿ. 15 (DaijiworldNews/SM): ಖಾಸಗಿ ಸ್ಲೀಪಿಂಗ್ ಕೋಚ್ ಬಸ್ ಗಳು ಜೋಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಹೈಟೆಕ್ ರೂಮ್ ಗಳನ್ನು ಮಾಡಿ ಅನೈತಿಕ ಚಟುವಟಿಕೆಗಳನ್ನು ಮಾಡುವ ದಂದೆ ಕಡಿಮೆ ಆಗುತ್ತಿದ್ದು, ಇದರ ಬದಲಿಗೆ ಹೈಟೆಕ್ ಸ್ಲೀಪರ್ ಬಸ್ ಗಳನ್ನು ಬಳಕೆ ಮಾಡಿಗೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದೆ.
ಹೋಟೆಲ್ ಹಾಗೂ ಇತರ ಲಾಡ್ಜ್ ಗಳಲ್ಲಿ ರೂಮ್ ಮಾಡಿ ಜೋಡಿಗಳ ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ ಎಂದು ಖುಷಿ ಪಟ್ಟರೆ ಇತ್ತ ಐಷಾರಾಮಿ ಖಾಸಗಿ ಬಸ್ ಗಳಲ್ಲಿ ಜೋಡಿಗಳ ಪ್ರಯಾಣ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಮನೆ ಮಾಡಿದೆ. ಲಾಡ್ಜ್ ಗಳಲ್ಲಿ ಜೋಡಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ದಾಖಲೆಗಳ ವಿಚಾರಣೆ ಸಹಿತ ಸಂಘಟನೆಗಳ ದಾಳಿಗಳಿಗೆ ಹೆದರಿ ಈ ರೀತಿಯಲ್ಲಿ ಬಸ್ ಗಳನ್ನು ಉಪಯೋಗಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಸ್ಲೀಪಿಂಗ್ ಕೋಚ್ ಬಸ್ ನಲ್ಲಿ ಪ್ರಯಾಣ ಮಾಡುವ ವೇಳೆ ಜೋಡಿಗಳಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ದೂರದ ಬೆಂಗಳೂರು ಸಹಿತ ಅನೇಕ ಊರುಗಳಿಗೆ ಸ್ಲೀಪಿಂಗ್ ಕೋಚ್ ಬಸ್ ಗಳಲ್ಲಿ ಟಿಕೆಟ್ ಕಾಯ್ದಿರಿಸುವ ಜೋಡಿಗಳು ಅದೇ ಬಸ್ ನಲ್ಲಿ ವಾಪಾಸು ಊರಿಗೆ ಬರುವಂತೆ ರಿಟರ್ನ್ ಟಿಕೆಟ್ ಕೂಡ ಮಾಡಲಾಗುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಇಂತಹ ಚಟುವಟಿಕೆಗಳು ಮುಂದೊಂದು ದಿನ ಸಮಾಜದಲ್ಲಿ ಅಶಾಂತಿ ಹಬ್ಬಲು ಮೂಲಕಾರಣವಾಗಬಹುದು ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿಬಂದಿದೆ. ಡಿ.15 ರಂದು ಗುರುವಾರ ರಾತ್ರಿ ಬೆಂಗಳೂರಿಗೆ ತೆರಳುವ ದುರ್ಗಾಂಬಾ ಬಸ್ ನಲ್ಲಿ ಅನ್ಯ ಸಮುದಾಯದ ಜೋಡಿಗಳು ಪ್ರಯಾಣ ನಡೆಸಿ ಗೊಂದಲಕ್ಕೆ ಕಾರಣವಾದ ಬಳಿಕ ಸಾರ್ವಜನಿಕ ವಲಯದಲ್ಲಿ ಈ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಇಂತಹ ದಂದೆಗಳು ಹೈಟೆಕ್ ಸ್ಲೀಪಿಂಗ್ ಕೋಚ್ ಬಸ್ ಗಳಲ್ಲಿ ನಡೆಯುವುದೇ ಆದರೆ ಪೊಲೀಸರು ಕ್ರಮ ಕೈಗೊಳ್ಳುವ ಅನಿವಾರ್ಯತೆ ಕೂಡ ಇದೆ.
ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುವ ಮೊದಲೇ ಎಚ್ಚರಿಕೆ ವಹಿಸುವ ಜವಬ್ದಾರಿ ಇಲಾಖೆಯ ಮೂಲಕ ಆಗಬೇಕಾಗಿದೆ.