ಮಂಗಳೂರು, ಡಿ 16 (DaijiworldNews/DB): ಅಂತಾರಾಷ್ಟ್ರೀಯ ಜಾಂಬೂರಿ ಕೇವಲ ಕಾಲೇಜು ಮಾತ್ರವಲ್ಲದೆ ಗ್ರಾಮಗಳಲ್ಲಿ ನಡೆಯುವ ಸಾಂಸ್ಕೃತಿಕ ಹಬ್ಬ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಹೇಳಿದ್ದಾರೆ.
ಡಿಸೆಂಬರ್ 16ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ನಮ್ಮ ಸಂಸ್ಕೃತಿ ನಮ್ಮ ಸ್ವಚ್ಚತೆ ಎಂಬ ಬೃಹತ್ ಸ್ವಚ್ಚತಾ ಶ್ರಮದಾನವನ್ನು ನಡೆಸುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮೂಡಬಿದ್ರೆಯನ್ನು ಸಂಪರ್ಕಿಸುವ ಮಾರ್ಗಗಳ ಇಕ್ಕೆಲಗಳಲ್ಲಿ ಹಲವಾರು ಕಡೆ ಬ್ಲಾಕ್ ಝೋನ್ಗಳಿದ್ದು ಅವುಗಳನ್ನು ಸ್ವಚ್ಚಗೊಳಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಎನ್ನುವುದು ಕೇವಲ ಕಾಲೇಜು ಆವರಣದಲ್ಲಿ ಮಾತ್ರವಲ್ಲದೆ ಎಲ್ಲಾ ಗ್ರಾಮಗಳಲ್ಲಿ ನಡೆಯುವ ಒಂದು ಸಾಂಸ್ಕೃತಿಕ ಹಬ್ಬವಾಗಿರುವುದರಿಂದ ಕಾರ್ಯಕ್ರಮದ ನಂತರವೂ ಸ್ವಚ್ಚತೆ ಕಾಪಾಡಿಕೊಳ್ಳಲು ಎಲ್ಲರು ಸಹಕರಿಸಬೇಕು. ಅದರೊಂದಿಗೆ ಸಾಂಸ್ಕೃತಿಕ ಹಬ್ಬಕ್ಕೆ ಸ್ವಚ್ಚತೆಯೊಂದಿಗೆ ನಾವೆಲ್ಲರು ಸಿದ್ದರಾಗೋಣ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಲು ಎಲ್ಲರೂ ಸಹಕರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಪಿಡಿಓ ಸುಧಾಕರ್, ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.