ಮಂಗಳೂರು, ಡಿ 16 (DaijiworldNews/DB): ಯುವ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛ- ಸುಂದರ ಮಂಗಳೂರು ಅಭಿಯಾನ ಒಂದು ಮಾದರಿ ಕಾರ್ಯಕ್ರಮ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸ್ವಚ್ಛ ಸುಂದರ ಮಂಗಳೂರು ಅಭಿಯಾನಕ್ಕೆ ನಗರದ ರಥಬೀದಿ ಬಸ್ ತಂಗುದಾಣದಲ್ಲಿ ಚಾಲನೆ ನೀಡಿ ಅವರು ಇಂದು ಮಾತನಾಡಿದರು.
ಬೆಳೆಯುತ್ತಿರುವ ಮಂಗಳೂರು ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು, ಯುವಜನರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮನ್ನು ಸ್ವಯಂಸ್ಪೂರ್ತಿಯಿಂದ ತೊಡಗಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ನಗರದ ಬಸ್ಸು ತಂಗುದಾಣವನ್ನು ಸುಂದರ ಸ್ವಚ್ಛ ಸುರಕ್ಷಿತ ಜಾಗವನ್ನಾಗಿ ಪರಿವರ್ತಿಸುವ ಸ್ಪರ್ಧೆಯ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಸ್ವಯಂ ಜಾಗೃತಿ ಮೂಡಿಸುವುದು,
ಯುವಜನರು, ವಿದ್ಯಾರ್ಥಿಗಳನ್ನು ಸ್ವಚ್ಛತಾ ಕಾರ್ಯದಲ್ಲಿ ಪಾಲುದಾರರನ್ನಾಗಿ ಮಾಡುವುದು ಉದ್ದೇಶವಾಗಿದೆ.
ಯುವ ಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಸ್ವಚ್ಛ ಸುಂದರ ಮಂಗಳೂರು' ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘ ಜಂಟಿಯಾಗಿ ರೂಪಿಸಿದ ವಿಶೇಷ ಕಾರ್ಯ ಕ್ರಮ ಎಂದು ತಿಳಿಸಿದರು.
ಈ ಕಾರ್ಯಕ್ರಮದದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಯುವ ರೆಡ್ಕ್ರಾಸ್ ಘಟಕಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಯುವ ರೆಡ್ ಕ್ರಾಸ್ ಘಟಕಗಳು ತಮ್ಮ ಕಾಲೇಜಿನ ಹತ್ತಿರ ಇರುವ ಬಸ್ಸು ತಂಗುದಾಣಗಳನ್ನುನಿರಂತರವಾಗಿ ಸ್ವಚ್ಚಗೊಳಿಸಿ ಸುಂದರವಾಗಿ ಹೂವಿನ ಗಿಡಗಳಿಂದ ಅಲಂಕರಿಸಿ ಸಾಮಾಜಿಕ ಶುಚಿತ್ವ, ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಫಲಕಗಳನ್ನು ಸ್ಥಾಪಿಸುವ ಮೂಲಕ ಹಾಗೂ ಸಾರ್ವಜನಿಕರಿಗೆ ಬಸ್ ತಂಗುದಾಣದ ಮೂಲಕ ಮಾಹಿತಿ, ಅರಿವು ನೀಡುವ ಆಕರ್ಷಕ ಕೇಂದ್ರವಾಗಿ ಬಸ್ ತಂಗುದಾಣವನ್ನು ಪರಿವರ್ತನೆ ಮಾಡುವ ಕಾರ್ಯಕ್ರಮವಿದು. ಕಾಲೇಜು ಘಟಕಗಳು ತಮ್ಮ ಕ್ರಿಯಾಶೀಲ ಚಿಂತನೆಯೊಂದಿಗೆ ಯುವ ರೆಡ್ ಕ್ರಾಸ್ ಸ್ವಯಂಸೇವಕರ ಸಹಕಾರದೊಂದಿಗೆ ಶುಚಿತ್ವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುವ ಮೂಲಕ ಈ ಸ್ಪರ್ಧೆ ಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ವಿವೇಕಾನಂದ ಜಯಂತಿಯ ಆಚರಣೆ ಸಂದರ್ಭದಲ್ಲಿ ಬಹುಮಾನ ಮತ್ತು ಪಶಸ್ತಿ ಪತ್ರಗಳನ್ನು ನೀಡಲಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮೇಯರ್ ಜಯಾನಂದ ಅಂಚನ್, ಅತಿಥಿಗಳಾಗಿ ಉಪ ಮೇಯರ್ ಪೂರ್ಣಿಮಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಸಭಾಪತಿ ಶಾಂತರಾಮ ಶೆಟ್ಟಿ, ರಥಬೀದಿ ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಯಕರ ಭಂಡಾರಿ, ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯ ರವೀಂದ್ರನಾಥ ಉಚ್ಚಿಲ್, ಯುವ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ಡಾ. ಮಹೇಶ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಾರ್ಯಕ್ರಮ ನಿರೂಪಿಸಿದರು. ಬಸ್ಸು ತಂಗುದಾಣದ ಬಳಿ ಗಿಡ ನೆಟ್ಟು ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ರಥಬೀದಿಯ ದಯಾನಂದ ಪೈ,ಸತೀಶ್ ಪೈ ಕಾಲೇಜಿನ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ಭಾಗವಹಿಸಿದರು.