ಉಪ್ಪಿನಂಗಡಿ,ಮಾ 06(MSP): ಕಂಬಳ ವೀಕ್ಷಿಸಲೆಂದು ಬಂದ ಸಂಬಂಧಿಕರಿಬ್ಬರೊಳಗೆ ಪರಸ್ಪರ ವೈಷಮ್ಯ ಮೂಡಿ ಕರಾಯ ಕಲ್ಲಾಪು ನಿವಾಸಿ ಮೋನಪ್ಪ ನಲಿಕೆ ಎಂಬುವರ ಪುತ್ರ ಯಶವಂತ (19) ಎಂಬುವರನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತಲೆಮರಿಸಿಕೊಂಡಿರುವ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಮಂಗಳವಾರ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿ ಬಂಟ್ವಾಳ ತಾಲ್ಲೂಕು ಕೊಡಂಬೆಟ್ಟು ನಿವಾಸಿ ರುಕ್ಮಯ ನಲಿಕೆ ಎಂಬುವರ ಪುತ್ರ ಆನಂದ. ಬಂಧಿತನಿಂದ ಕೊಲೆಗೆ ಬಳಸಲಾದ ಸಣ್ಣ ಕತ್ತಿ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಉಪ್ಪಿನಂಗಡಿ ಎಸ್ಐ ನಂದಕುಮಾರ್ ತಿಳಿಸಿದ್ದಾರೆ.ಉಪ್ಪಿನಂಗಡಿಯಲ್ಲಿ ಶನಿವಾರ ರಾತ್ರಿ ವಿಜಯ-ವಿಕ್ರಮ ಕಂಬಳ ವೀಕ್ಷಿಸಲೆಂದು ಬಂದಿದ್ದಾಗ ಆರೋಪಿ ಆನಂದ, ಯಶವಂತರನ್ನು ಮಾರಕಾಯುಧದಿಂದ ತಿವಿದು ಕೊಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಾ.06ರ ಮಂಗಳವಾರ ಮಡಂತ್ಯಾರು ಕಡೆಯಿಂದ ಕಲ್ಲೇರಿ ಕಡೆಗೆ ಬರುತ್ತಿದ್ದ ಬಗೆಗಿನ ಖಚಿತ ಮಾಹಿತಿಯಂತೆ ಕಲ್ಲೇರಿಯಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿ ಆನಂದ ವಿವಾಹಿತನಾಗಿದ್ದು, ಆತನ ಪತ್ನಿಯ ಸಂಬಂಧಿ ಹುಡುಗಿಯನ್ನು ಯಶವಂತ ಪ್ರೇಮಿಸುತ್ತಿದ್ದ ಬಗ್ಗೆ ಆನಂದನಿಗೆ ಆಕ್ರೋಶವಿತ್ತು. ಅದಾಗ್ಯೂ ಎರಡು ತಿಂಗಳ ಹಿಂದೆ ಮೃತ ಪಟ್ಟ ಆನಂದನ ಮಗುವಿನ ಸಾವಿಗೆ ತಾನೇ ಕಾರಣನೆಂದು ಯಶವಂತ ಮದ್ಯಪಾನ ಮಾಡಿದಾಗಲೆಲ್ಲಾ ಹೇಳುತ್ತಿದ್ದ ಹಿನ್ನೆಲೆಯಲ್ಲಿ ಆತನ ಮೇಲೆ ಆಕ್ರೋಶಗೊಂಡಿದ್ದ.
‘ನಾನು ಕಂಬಳಕ್ಕೆ ಬಂದಿದ್ದ ವೇಳೆ ಭೂತಾರಾಧನೆಯಲ್ಲಿ ಬಳಸಲಾಗುತ್ತಿದ್ದ ಸಣ್ಣ ಕತ್ತಿಯ ಸಹಾಯದಿಂದ ಯಶವಂತನನ್ನು ತಿವಿದು ಕೊಲೆ ಮಾಡಿರುವುದಾಗಿ’ ಆನಂದ ವಿಚಾರಣೆಯ ವೇಳೆ ತಿಳಿಸಿದ್ದಾನೆ ಎಂದು ಎಸ್ಐ ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಅವರ ನಿರ್ದೇಶನದಂತೆ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿಯಾದ ಹರಿಶ್ಚಂದ್ರ, ದೇವದಾಸ್, ಗಣೇಶ್ ಪ್ರಸಾದ್, ಸಂಗಯ್ಯ, ಹರೀಶ್ ಗೌಡ, ಇರ್ಷಾದ್, ಜಗದೀಶ್, ಪ್ರತಾಪ್, ಸಂಪತ್, ದಿವಾಕರ್, ಜೀಪು ಚಾಲಕರಾದ ನವಾಜ್, ನಾರಾಯಣ ಗೌಡ ಭಾಗವಹಿಸಿದ್ದರು.