ಮಂಗಳೂರು,ಮಾ 06(MSP): ದಕ್ಷಿಣ ಭಾರತದ ಸಮುದ್ರ ತೀರದ ಮೂಲಕ ಭಯೋತ್ಪಾದಕರು ದೇಶದೊಳಗೆ ನುಸುಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಕರ್ನಾಟಕ ಮತ್ತು ಕೇರಳದ ತೀರ ಪ್ರದೇಶದಲ್ಲಿ ಭಾರಿ ಕಣ್ಗಾವಲು ಹಾಕಲಾಗಿದೆ.ಪುಲ್ವಾಮ ಉಗ್ರ ದಾಳಿ ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ಮಾರ್ಗದ ಮೂಲಕ ಪಾಕ್ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಕರಾವಳಿಯ ಕಡಲು ತೀರದಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ.
ಕರಾವಳಿ ಪೊಲೀಸ್ ಕಾವಲು ಪಡೆ ಸಮುದ್ರ ಮಾರ್ಗದ ಭದ್ರತೆ ಹೆಚ್ಚಿಸಿದ್ದು, ನಿರಂತರ ಗಸ್ತು ವ್ಯವಸ್ಥೆ ಜಾರಿಗೊಳಿಸಲಾಗಿದೆ.ಕರಾವಳಿ ಪೊಲೀಸ್ ಕಾವಲು ಪಡೆ ಸಮುದ್ರ ಮಾರ್ಗದ ಭದ್ರತೆ ಹೆಚ್ಚಿಸಿದ್ದು, ನಿರಂತರ ಗಸ್ತು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸಮುದ್ರ ಮಾರ್ಗದಲ್ಲಿ ಪ್ರಯಾಣಿಸುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳು ಅಪರಿಚಿತ ಮೀನುಗಾರರು ಸಹಿತ ಸಮುದ್ರ ಮಾರ್ಗದಲ್ಲಿ ವ್ಯವಹರಿಸುವವರ ಬಗ್ಗೆ ಕರಾವಳಿ ಕಾವಲು ಪಡೆ ಅಲರ್ಟ್ ಆಗಿದೆ. ಪುಲ್ವಾಮ ಘಟನೆ ಬಳಿಕ ದಕ್ಷಿಣ ಕನ್ನಡ ಸಮುದ್ರ ಕಿನಾರೆಯಲ್ಲೂ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಕರಾವಳಿ ಪೊಲೀಸ್ ಕಾವಲು ಪಡೆ ಮೂಲಗಳು ತಿಳಿಸಿವೆ.
ದಿನದ ೨೪ ಗಂಟೆಯೂ ಸಮುದ್ರದಲ್ಲಿ ಕಾವಲು ನಡೆಸಲಾಗುತ್ತಿದೆ.ಮೀನುಗಾರರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು, ಅಪರಿಚಿತರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಎರಡು ದಿನಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ ಎಂದು ಕರಾವಳಿ ಪೊಳೀಸ್ ಕಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಪ್ರಮುಖ ಉದ್ದಿಮೆ ಸ್ಥಳಗಳಾದ ಎನ್ ಎಂಪಿಟಿ,ಎಂಸಿಎಫ್, ಕೆಐಒಸಿಎಲ್,ಎಂಆರ್ ಪಿ ಎಲ್, ವಿಮಾನ ನಿಲ್ದಾಣ ಮೊದಲಾದ ಕಡೆ ಪೊಲೀಸ್ ನೇಮಕ ಮಾಡಿದ್ದು, ಅವರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ’ಭಾರತದ ಮೇಲೆ ಸಮುದ್ರ ಮಾರ್ಗದ ಮೂಲಕ ನುಸುಳಿ, ದಾಳಿ ನಡೆಸುವ ಉದ್ದೇಶದಿಂದ ಉಗ್ರರಿಗೆ ತರಬೇತಿ ನೀಡಲಾಗುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ’ ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಎಚ್ಚರಿಕೆ ನೀಡಿದ್ದಾರೆ.