ಉಡುಪಿ, ಮಾ 06(SM):ಸ್ವತಃ ಕೈ ಹಿಡಿದ ಪತಿಯೇ ಪತ್ನಿಯನ್ನು ಹೊಡೆದು ಹಲ್ಲೆ ನಡೆಸಿ, ಆಕೆಯ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲು ಸಂಚು ರೂಪಿಸಿದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ ಶಾನುಭಾಗ್, ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಉಡುಪಿ ಕರಂಬಳ್ಳಿ ಗ್ರಾಮದ ನಿವಾಸಿ ಮೂಸ ಅಬ್ದುಲ್ ಖಾದರ್ ಅವರ ಮಗ ಮಹಮ್ಮದ್ ಶರೀಫ್ ಅಲಿ(32) ಪತ್ನಿಯನ್ನು ಜೈಲಿಗೆ ಕಳುಹಿಸಲು ಸಂಚು ಹೂಡಿದ ಆರೋಪಿ. ಈತನು 2013ರಲ್ಲಿ ಕೇರಳದ ತಲಶೇರಿಯ ಸಫೀಯಾ ಎಂಬವರ ಮಗಳನ್ನು ಮದುವೆಯಾಗಿದ್ದ. ಮದುವೆ ನಿಗದಿಯಾಗುವ ತನಕ ಯಾವುದೇ ಬೇಡಿಕೆ ಇಡದ ಆತ, ಮದುವೆ ನಿಶ್ಚಯವಾಗುತ್ತಿದ್ದಂತೆ ವರದಕ್ಷಿಣೆಯ ರೂಪದಲ್ಲಿ 240 ಗ್ರಾಂ ಚಿನ್ನಾಭರಣಗಳನ್ನು ಪಡೆದಿದ್ದ ಎಂದು ಅವರು ತಿಳಿಸಿದ್ದಾರೆ.
ನಿರುದ್ಯೋಗಿಯಾಗಿದ್ದ ಆತ ಡ್ರೈವರ್ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ. ಮದುವೆಯಾಗಿ 2 ತಿಂಗಳಲ್ಲಿ ಪತ್ನಿಯಿಂದ ಬಲವಂತವಾಗಿ ಚಿನ್ನಾಭರಣಗಳನ್ನು ಕಸಿದುಕೊಂಡ ಪತಿರಾಯ, ಆ ಆಭರಣಗಳನ್ನು ಮಾರಾಟ ಮಾಡಿ ಮೀನುಸಾಗಾಟ ಮಾಡುವ ಲಾರಿಯೊಂದನ್ನು ಖರೀದಿಸಿದ್ದ. ಆದರೆ ಅದನ್ನು ಕೆಲವೇ ದಿನಗಳಲ್ಲಿ ಮಾರಾಟ ಮಾಡಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕುಡಿತದ ಚಟ ಬೆಳೆಸಿಕೊಂಡಿದ್ದ ಆತ ಪ್ರತಿದಿನ ಕುಡಿದು ಬಂದು ಜಂಶೀನಾಳನ್ನು ಹೊಡೆದು ತವರು ಮನೆಯಿಂದ ಇನ್ನಷ್ಟು ಹಣ ತರುವಂತೆ ಪೀಡಿಸುತ್ತಿದ್ದ. ಪ್ರತಿ 3 ತಿಂಗಳಿಗೊಮ್ಮೆ ಹೆಂಡತಿಯನ್ನು ತವರು ಮನೆಗೆ ಕಳುಹಿಸಿ, ವರ್ಷದಲ್ಲಿ ಸುಮಾರು 6 ಲಕ್ಷ ರೂ.ಗಳನ್ನು ಪಡೆದಿದ್ದ ಎನ್ನಲಾಗಿದೆ.
ಅಲ್ಲದೆ, ಶರೀಫ್ 2014ರಲ್ಲಿ ಹಾಗೂ 2017ರಲ್ಲಿ ಎರಡು ಬಾರಿ ಗಲ್ಫ್ ದೇಶದಲ್ಲಿ ಉದ್ಯೋಗಕ್ಕೆಂದು ಹೋಗಲು ಪತ್ನಿಯ ಮನೆಯವರಿಂದ ಹಣ ಪಡೆದಿದ್ದ. ಆದರೆ ಅಲ್ಲಿಯೂ ಸರಿಯಾಗಿ ಕೆಲಸ ಮಾಡದೆ ವಾಪಸ್ಸು ಊರಿಗೆ ಬಂದಿದ್ದ ಎನ್ನಲಾಗಿದೆ.
ಜಂಶಿನಾಗೆ ಸಾಲದ ಹೊರೆ:
ಜಂಶಿನಾಳಿಗೆ ತನ್ನ ಪತಿ ಶರೀಫ್ ಒಂದು ಕಡೆ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇತ್ತ ಆಕೆಯ ಅತ್ತೆ ಶರೀಫ್ನ ತಾಯಿ ಹಲೀನಾಬಿ ಜಂಶಿನಾಳ ಹೆಸರಿನಲ್ಲಿ ಮುತ್ತೂಟ್ ಫೈನಾನ್ಸ್, ಶ್ರೀರಾಮ್ ಫೈನಾನ್ಸ್, ಮೀನುಗಾರರ ಸಹಕಾರಿ ಸಂಘಗಳಲ್ಲಿ ಲಕ್ಷಾಂತರ ರೂ. ಸಾಲ ತೆಗೆದಿದ್ದರು. ಇದನ್ನು ಹಿಂತಿರುಗಿಸಿದ್ದಾರೆ ಎಂಬ ಮಾಹಿತಿ ಆಕೆಗಿಲ್ಲ. 2016ರಲ್ಲಿ ಜಂಶಿನಾಳಿಗೆ 35 ಸಾವಿರ ರೂ. ವಿಮೆಯ ಹಣ ಸಿಕ್ಕಿದಾಗ, ಊರಿಗೆ ಬಂದ ಶರೀಫ್ ಅದನ್ನೂ ಲಪಟಾಯಿಸಿದ್ದ ಎನ್ನಲಾಗಿದೆ.
ಇತ್ತೀಚೆಗೆ ಶರೀಫ್ ತನ್ನ ಪತ್ನಿ ಜಂಶಿನಾ ಹೆಸರಿನಲ್ಲಿದ್ದ ವಿಜಯ ಬ್ಯಾಂಕಿನ ಚೆಕ್ಕುಗಳಿಗೆ, ಆಕೆಗೆ ಹೊಡೆದು ಸಹಿ ಹಾಕಿಸಿಕೊಂಡಿದ್ದನು. ಆ ಪೈಕಿ 3 ಚೆಕ್ಕುಗಳಲ್ಲಿ ಲಕ್ಷಾಂತರ ರೂ.ಗಳನ್ನು ನಮೂದಿಸಿ ತನ್ನ ಸೇಹಿತರ ಮೂಲಕ ಬ್ಯಾಂಕಿಗೆ ಹಾಕಿಸಿ ಚೆಕ್ ಬೌನ್ಸ್ ಮಾಡಿದ್ದಾನೆ. ಕೇಳಿದಷ್ಟು ಹಣ ನೀಡದಿದ್ದರೆ ನಿನ್ನನ್ನು ಜೈಲಿಗೆ ಅಟ್ಟುತ್ತೇನೆಂದು ಬೆದರಿಕೆಯನ್ನು ಒಡ್ಡಿದ್ದಾನೆ ಎಂದು ಮಾಹಿತಿ ಲಭಿಸಿದೆ.
ಇದೀಗ ಈ ಎಲ್ಲಾ ಘಟನೆಗಳ ಒತ್ತಡದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಜಂಶಿನಾ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಾಯದಿಂದ ಶರೀಫ್ ಮೇಲೆ ಕ್ರಿಮಿನಲ್ ಷಡ್ಯಂತ್ರ, ವರದಕ್ಷಿಣಿ ಹಿಂಸೆ, ದೈಹಿಕ ಹಿಂಸೆ, ಬ್ಯಾಂಕಿಂಗ್ ಅವ್ಯವಹಾರದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಜಂಶಿನಾಳ ಗಂಡ ಶರೀಫ್ ಕೈಯಲ್ಲಿ ಇನ್ನೂ ಆಕೆ ಸಹಿ ಇರುವ 10ರಿಂದ 11 ಚೆಕ್ಕುಗಳಿವೆ. ಅವುಗಳನ್ನು ಸಾಲಗಾರರಿಗೆ ಕೊಟ್ಟರೇ, ನಿರಪರಾಧಿ ಜಂಶಿನಾ ಜೈಲಿಗೆ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಆಕೆಯ ಹೆಸರಿನಲ್ಲಿ ನೀಡಲಾಗುವ ಯಾವುದೇ ಚೆಕ್ಕುಗಳನ್ನು ಯಾರೂ ಪಡೆಯಬಾರದು. ಗಂಡನ ತಪ್ಪಿಗೆ ನಿರಪರಾಧಿ ಆಕೆಗೆ ತೊಂದರೆ ನೀಡಬಾರದು. ಆಕೆಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು ಎಂದು ಡಾ. ರವೀಂದ್ರನಾಥ ಶ್ಯಾನುಭಾಗ್ ಮನವಿ ಮಾಡಿಕೊಂಡಿದ್ದಾರೆ.