ಕುಂದಾಪುರ, ಡಿ 15 ( DaijiworldNews/MS): ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಶೈಕ್ಷಣಿಕ ಸಮಸ್ಯೆಯನ್ನು ಕೂಡಲೆ ಸರಿಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕುಂದಾಪುರ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿತು.
ಫಲಿತಾಂಶವನ್ನ ಕ್ಲಪ್ತ ಸಮಯದಲ್ಲಿ ಪ್ರಕಟ ಮಾಡುತ್ತಿಲ್ಲ, ಪರೀಕ್ಷೆ ಮುಗಿದು 1 ವರ್ಷ ಹತ್ತಿರವಾದರೂ ಇನ್ನೂ ಕೂಡ ಮೌಲ್ಯಮಾಪನವಾಗಿಲ್ಲ. ಅಂಕಪಟ್ಟಿ ಇಲ್ಲದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಅಂಕಪಟ್ಟಿ ಇಲ್ಲದೆ ಉದ್ಯೋಗವಕಾಶಗಳಿಗೆ ಸೇರಲು ಆಗುತ್ತಿಲ್ಲ, ಅಂಕಪಟ್ಟಿ ಬರದೇ ಇರುವ ಕಾರಣದಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಆಗುತ್ತಿಲ್ಲ. ಅಂಕಪಟ್ಟಿಗಾಗಿ ದೂರದ ಬೈಂದೂರಿನಿಂದ ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಹೋಗುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದರು ಸಹ ಅದೇ ದಿನದಲ್ಲಿ ಅಂಕಪಟ್ಟಿ ಸಿಗುವುದಿಲ್ಲ. ಎರಡು ಮೂರು ಬಾರಿ ಅಲೆಯ ಬೇಕಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆದುಕೊಳ್ಳಲು ಹೋದರೆ ವಿಶ್ವವಿದ್ಯಾನಿಲಯದಿಂದ ಯಾವುದೇ ಒಂದು ಪ್ರತಿಸ್ಪಂದನ ಸಿಗುತ್ತಿಲ್ಲ. ಮೌಲ್ಯಮಾಪನ ಸೂಕ್ತ ಸಮಯದಲ್ಲಿ ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸುವಂತಾಗಿದೆ. ಮರು ಪರೀಕ್ಷೆ ಕಟ್ಟಿದಾಗ ಫಲಿತಾಂಶ ಬರುವುದು ತುಂಬಾ ತಡವಾಗುತ್ತದೆ. ಅನುತೀರ್ಣ ಆದಾಗ ವಿದ್ಯಾರ್ಥಿಗಳು ದಂಡವನ್ನು ಕಟ್ಟಿ ಮರು ಪರೀಕ್ಷೆಗೆ ಅರ್ಜಿ ಹಾಕುತ್ತಾರೆ. ಅದರ ಮರು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾವು ಕಟ್ಟಿದ ದಂಡದ ಶುಲ್ಕ ವಾಪಾಸು ಬರುವುದಕ್ಕೆ ಒಂದು ವರ್ಷವಾದರೂ ಬರುವುದಿಲ್ಲ. ಅಂಕಪಟ್ಟಿಯಲ್ಲಿ ತುಂಬ ದೋಷಗಳು ಇರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ.ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ಭಂಡಾರ್ ಕಾರ್ಸ್ ಕಾಲೇಜು ವಿದ್ಯಾರ್ಥಿಗಳು, ಕಾಳವಾರ ವರದರಾಜ ಎಮ್ ಶೆಟ್ಟಿ ಸರಕಾರಿ ಪದವಿ ಕಾಲೇಜು ಕಾಗೇರಿ ಇಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ್ ಧನುಷ್ ಪೂಜಾರಿ, ತಾಲೂಕು ಸಂಪರ್ಕ ಪ್ರಮುಖ್ ರಾಹುಲ್ ಶೆಟ್ಟಿ, ಬಿ ಬಿ ಹೆಗ್ಡೆ ಕಾಲೇಜು ಘಟಕದ ಅಧ್ಯಕ್ಷ ವಿಶ್ಲೇಶ್ ಶೆಟ್ಟಿ, ಭಂಡಾರ್ ಕಾರ್ಸ್ ಕಾಲೇಜು ಘಟಕದ ಅಧ್ಯಕ್ಷ ವೀಕ್ಷಿತ್, ಕಾಗೇರಿ ಕಾಲೇಜು ಘಟಕದ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.