ಉಡುಪಿ.ಮಾ,05,(AZM):ಮಾ.1ರಂದು ನಡೆದ ಗುಲಾಬಿ ಮೊಗವೀರ(55) ಅವರ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಇವರನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಮರಣೋತ್ತರ ಪರೀಕ್ಷೆಯ ಮೂಲಕ ತಿಳಿದು ಬಂದಿದೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ನೀಡಿದ ವರದಿಯನ್ನು ಆಧರಿಸಿ ಗುಲಾಬಿ ಅವರ ಸಂಬಂಧಿ ಉದಯ ಚಾತ್ರ ಬೆಟ್ಟು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆ.28ರ 8ಗಂಟೆಯಿಂದ ಮಾ.1ರ 11 ಗಂಟೆ ಮದ್ಯಾವಧಿಯಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಗುಲಾಬಿ ಅವರನ್ನು ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಕುತ್ತಿಗೆಯನ್ನು ಹಿಸುಕಿ ಉಸಿರು ಗಟ್ಟಿಸಿ ಸಾಯಿಸಿ, ಅವರ ಮೈಮೇಲಿದ್ದ ಸುಮಾರು 1.45ಲಕ್ಷ ರೂ. ಮೌಲ್ಯದ ಒಟ್ಟು 40 ಗ್ರಾಪಂ ತೂಕದ ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವದ ಏಳು ಪೊಲೀಸ್ ತಂಡ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ ಎಂದು ತಿಳಿದುಬಂದಿದೆ.