ಮಂಗಳೂರು, ಡಿ 15( DaijiworldNews/MS): ನಕಲಿ ದಾಖಲೆ ಸೃಷ್ಟಿಸಿ ತಾಯಿಗೆ, ಮಗಳು ಮತ್ತು ಆಕೆಯ ಸ್ನೇಹಿತೆ ಸೇರಿ 1.25 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರೀಟಾ ಪೇರಿಸ್ ದೂರು ನೀಡಿದವರಾಗಿದ್ದು ಅವರ ಪುತ್ರಿ ನಿಕಿತಾ ಪೇರಿಸ್ ಮತ್ತು ಗೋಡ್ವಿನ್ ಫೆರ್ನಾಂಡಿಸ್ ಆರೋಪಿಗಳಾಗಿದ್ದಾರೆ.
ದೂರಿನಲ್ಲಿ ರೀಟಾ ಪೇರಿಸ್ ಮತ್ತು ಅವರ ಪುತ್ರ ಅಮಿತ್ ಪೇರಿಸ್ ವಿದೇಶದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ. ರೀಟಾ ಪೇರಿಸ್ ಅವರ ಪುತ್ರಿ ನಿಕಿತಾ ಪೇರಿಸ್ ಮುದರಂಗಡಿಯ ಗೋಡ್ವಿನ್ ಫೆರ್ನಾಂಡಿಸ್ನ ಜತೆ ಸೇರಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಉಡುಪಿಯ ವಕೀಲರಿಂದ ನಕಲಿ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದ್ದು ರೀಟಾ ಪೇರಿಸ್ ಮತ್ತು ಅಮಿತ್ ಪೇರಿಸ್ ಅವರ ನಕಲಿ ಸಹಿ ಮಾಡಿ ಬ್ಯಾಂಕ್ ಮ್ಯಾನೇಜರ್ಗೆ ದಾಖಲಾತಿ ನೀಡಿ ಫ್ಲ್ಯಾಟಿನ ಮೇಲೆ 25 ಲ.ರೂ. ಗೃಹಸಾಲ ಪಡೆದಿದ್ದಾರೆ. ಅನಂತರ ನಕಲಿ ಸಹಿ ಮಾಡಿದ ದಾಖಲೆಯನ್ನು ನೀಡಿ ವಾಮಂಜೂರಿನ ಬ್ಯಾಂಕ್ ಖಾತೆಯ ಲಾಕರ್ನಲ್ಲಿದ್ದ ರೀಟಾ ಪೇರಿಸ್ ಅವರಿಗೆ ಸೇರಿದ 1 ಕೋ.ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ನಕಲಿ ಸಹಿ ಮಾಡಿ ರೀಟಾ ಪೇರಿಸ್ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿ ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.