ಮಂಗಳೂರು, ಡಿ 15( DaijiworldNews/MS): ಚುನಾವಣೆ ಸಮೀಪಿಸುತ್ತಿರೋ ಬೆನ್ನಲ್ಲೇ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರು ವಾಸ್ತು ದೋಷ ಪರಿಹಾರಕ್ಕೆ ಮುಂದಾಗಿದ್ದಾರೆಯೇ ಎಂಬ ವಿಚಾರ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದು ಇದಕ್ಕೆ ಕಾರಣವಾಗಿದ್ದು, 'ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳ ನವೀಕರಣ ಕಾಮಗಾರಿ '.
ಕಾಂಗ್ರೆಸ್ ಕಚೇರಿ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು. ಆದರೆ ವಾಸ್ತು ಪ್ರಕಾರ ಎಂಟು ಮೆಟ್ಟಿಲುಗಳು ಇರುವುದು ದೋಷ. ವಾಸ್ತು ಪದ್ದತಿ ಪ್ರಕಾರ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳಿರಬೇಕು. ಹೀಗಾಗಿ ಇದನ್ನು ಬೆಸ ಸಂಖ್ಯೆಗೆ ಪರಿವರ್ತಿಸುವ ಕಾಮಗಾರಿ ನಡೆಯುತ್ತಿದೆ ಎಂಬ ಮಾತು ರಾಜಕೀಯವಾಗಿ ಚರ್ಚೆ ಹುಟ್ಟುಹಾಕಿದೆ.
2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆಯಾಗಿತ್ತು. 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿತ್ತು. ಹೀಗಾಗಿ ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣ ನಡೆಸಲಾಗುತ್ತಿದ್ದು, ಎಂಟರ ಬದಲು ಒಂಭತ್ತು ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
ಆದರೆ ವಾಸ್ತು ವಿಚಾರವನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಮುಖಂಡರು, ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್ ದುರಸ್ತಿಗಾಗಿ ಮೆಟ್ಟಿಲು ದುರಸ್ತಿ ಮಾಡಲಾಗಿದ್ದು, ಇದರಲ್ಲಿ ವಾಸ್ತು ವಿಚಾರ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ ಸೋತಿರುವ ಬಗೆಗೂ ಇದಕ್ಕೂ ಚರ್ಚೆ ಬೇಡ. ಈ ಬಾರಿ ನಾವೇ ಗೆಲುವಿನ ಮೆಟ್ಟಿಲು ಹತ್ತುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಹಿಂದೂಗಳ ಪ್ರತೀ ಆಚರಣೆಯನ್ನೂ ಅಣಕ ಮಾಡುವ ಕಾಂಗ್ರೆಸ್ ಈಗ ಸೋಲಿನ ಭೀತಿಯಿಂದ ವಾಸ್ತುದೋಷದ ಮೊರೆ ಹೋಗಿರುವುದು ತಲೆಗೆ ಹೊಯ್ದ ನೀರು ಕಾಲಿಗೆ ಬರಲೇಬೇಕು ಎಂಬುದಕ್ಕೆ ಉದಾಹರಣೆ ಎಂದಿದ್ದಾರೆ.