ಮಂಗಳೂರು, ಡಿ 14 (DaijiworldNews/SM): ದ.ಕ.ಜಿಲ್ಲೆಯಲ್ಲಿ ಉಂಟಾಗಿದ್ದ ಮರಳು ಸಮಸ್ಯೆಯನ್ನು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಗಂಭೀರವಾಗಿ ಪರಿಗಣಿಸಿದ್ದು, ಈ ಹಿನ್ನೆಲೆಯಲ್ಲಿ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಹೈಕೋರ್ಟ್ ಆದೇಶದ ಪ್ರಕಾರ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಕರಾವಳಿ ನಿಯಂತ್ರಣ ವಲಯ (ಸಿಆರ್ಝೆಡ್)ದ ನೇತ್ರಾವತಿ ಮತ್ತು ಫಲ್ಗುಣಿ ನದಿ ತಟಗಳಲ್ಲಿ ಸಾಂಪ್ರದಾಯಿಕ ಮರಳು ತೆಗೆಯುವ 202 ಮಂದಿಗೆ ಮಾನವ ಶ್ರಮದಿಂದ ಮರಳು ದಿಬ್ಬ ತೆರವು/ಸಾಗಾಟಕ್ಕೆ ಅವಕಾಶ ಕಲ್ಪಿಸಿ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ.
ರಾಜ್ಯ ಹೈಕೋರ್ಟ್ನಲ್ಲಿ ದಾಖಲಾಗಿದ್ದ ರಿಟ್ ಅರ್ಜಿಗೆ ಸಂಬಂಧಿಸಿ ನ್ಯಾಯಾಲಯ ಆದೇಶ ನೀಡಿದ್ದು, ಸುಪ್ರೀಂ ಕೋರ್ಟ್ನ ಚೆನ್ನೈಯ ರಾಷ್ಟ್ರೀಯ ಹಸಿರು ಪೀಠದಲ್ಲಿ ದಾಖಲಾಗಿರುವ ಅರ್ಜಿಯ ಆದೇಶವು ಉಡುಪಿ ಜಿಲ್ಲೆಗೆ ಸಂಬಂಧಪಟ್ಟದ್ದಾಗಿದೆ. ಹೈಕೋರ್ಟ್ ಆದೇಶ ಪಾಲನೆ ಮಾಡದೆ ಸರಕಾರಕ್ಕೆ ಮತ್ತು ಸಿಆರ್ಝೆಡ್ ಪ್ರಾಧಿಕಾರಕ್ಕೆ ಮಾರ್ಗದರ್ಶನ ಕೋರಿರುವುದರಿಂದ ನ್ಯಾಯಾಂಗ ನಿಂದನೆಯಾಗುವ ಸಂಭವವಿತ್ತು.
ದ.ಕ. ಜಿಲ್ಲಾಧಿಕಾರಿಯ ಆದೇಶ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್ಗಳನ್ನು ನ್ಯಾಯಾಲಯವು ವಜಾ ಮಾಡಿರುವುದರಿಂದ ಈ ಹಿಂದೆ ಮರಳು ತೆಗೆಯುತ್ತಿದ್ದ ಸಾಂಪ್ರದಾಯಿಕ ಮರಳು ತೆಗೆಯುವ 202 ಮಂದಿಯ ತಾತ್ಕಾಲಿಕ ಪರವನಗಿ ಹೊಂದಿದ್ದ ವ್ಯಕ್ತಿ/ಸಮುದಾಯದವರಿಗೆ ಮಾನವ ಶ್ರಮದಿಂದ ಮರಳು ದಿಬ್ಬ ತೆರವುಗೊಳಿಸಲು ಅನುಮತಿ ತಾನಾಗಿಯೇ ಮುಂದುವರೆದಿರುತ್ತದೆ ಎಂದು ವರದಿಯಾಗಿದೆ.